ಮಾನದಂಡ ಆಧರಿಸಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸ್ಥಾಪನೆ: ಲಕ್ಷ್ಮಣ ಸವದಿ

Update: 2021-03-10 17:41 GMT

ಬೆಂಗಳೂರು, ಮಾ. 10: ರಾಜ್ಯದ ಐದು ಕಡೆ ಹೊಸದಾಗಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳನ್ನು ಪ್ರಾರಂಭಿಸುವ ಕುರಿತು ಸಾರಿಗೆ ಆಯುಕ್ತರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳನ್ನು ತೆರೆಯಲು ನಿಗದಿತ ಮಾನದಂಡಗಳಿವೆ. ಕಚೇರಿಗಳ ಅಂತರವು 50 ಕಿ.ಮೀ. ಇರಬೇಕು. ವಾರ್ಷಿಕ 10 ಸಾವಿರ ವಾಹನಗಳು ನೋಂದಣಿಯಾಗಬೇಕು. ಕನಿಷ್ಠ 10 ಸಾವಿರ ಚಾಲನಾ ಲೈಸನ್ಸ್‍ಗಳ ನೀಡಿಕೆಯಾಗಬೇಕು. ಕನಿಷ್ಠ 30ಸಾವಿರ ವಾಹನಗಳು ನೋಂದಣಿಯಾಗಬೇಕು ಮತ್ತು 20ಕೋಟಿ ರೂ.ರಾಜಸ್ವ ಸಂಗ್ರಹ ಆಗಬೇಕೆಂಬ ಮಾನದಂಡಗಳ ಆಧಾರದ ಮೇಲೆ ಕಚೇರಿಯನ್ನು ತೆರೆಯಲು ಅವಕಾಶ ನೀಡಲಾಗುತ್ತದೆ ಎಂದು ವಿವರಿಸಿದರು.

ಇದೀಗ ಉಡುಪಿ ಜಿಲ್ಲೆಯ ಕುಂದಾಪುರ, ರಾಯಚೂರು ಜಿಲ್ಲೆಯ ಸಿಂಧನೂರು ಅಥವಾ ಲಿಂಗಸುಗೂರು, ವಿಜಯಪುರ ಜಿಲ್ಲೆಯ ಇಂಡಿ ಅಥವಾ ಸಿಂಧಗಿ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಕಚೇರಿ ಆರಂಭಿಸುವ ಕುರಿತು ಪ್ರಸ್ತಾವನೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News