ಮುಖ್ಯಮಂತ್ರಿಗೆ ಸರ್ಕಾರ ನಡೆಸಲು ಬರುವುದಿಲ್ಲ: ವಾಟಾಳ್ ನಾಗರಾಜ್

Update: 2021-03-10 17:55 GMT

ಮೈಸೂರು,ಮಾ.10: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ನಡೆಸಲು ಬರುವುದಿಲ್ಲ, ಅವರಿಗೆ ಗೂಂಡಾಗಿರಿ ನಡೆಸಲು ಬರುತ್ತದೆ ಎಂದು ಕನ್ನಡ ಚಳುವಲಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ನಗರದ ಆರ್ ಗೇಟ್ ವೃತ್ತದಲ್ಲಿ ಬುಧವಾರ ಟಾಂಗಾ ಗಾಡಿ ಏರಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ಒತ್ತಾಯಿಸಿ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. 

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್‍ನಾಗರಾಜ್, ಇಂತಹ ಕೀಳುಮಟ್ಟದ ರಾಜಕೀಯ ಸರ್ಕಾರವನ್ನು ನಾನು ನೋಡಿಲ್ಲ. ಯಡಿಯೂರಪ್ಪರಿಗೆ ಗೂಂಡಾಗಿರಿ ಮಾಡಲು ಬರುತ್ತೆ, ಸರ್ಕಾರ ನಡೆಸಲು ಬರಲ್ಲ. ನಮ್ಮದು ಕರ್ನಾಟಕ ರಾಜ್ಯ, ಇದು ಜಾತಿಯ ರಾಜ್ಯವಲ್ಲ. ಜಾತಿಗೊಂದು ಪ್ರಾಧಿಕಾರ ಮಾಡಿ ಎಲ್ಲರೂ ದುಡ್ಡು ಹಂಚುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಇನ್ನು ನೂರಾರು ಜಾತಿಯವರು ಮುಂದೆ ಪ್ರಾಧಿಕಾರ ಕೇಳುತ್ತಾರೆ. ಯಡಿಯೂರಪ್ಪರ ಬಜೆಟ್ ಜಾತಿಯ ಬಜೆಟ್. ಯಡಿಯೂರಪ್ಪಗೆ ಬಜೆಟ್ ಮಂಡನೆ ಮಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕ್ಯಾಬಿನೆಟ್ ನಲ್ಲಿರುವ 6  ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರು ನ್ಯಾಯಾಲಯಕ್ಕೆ ಹೋಗಿದ್ದ ಮೇಲೆ ಅವರ ಮೇಲೆ ಆಪಾದನೆ ಇದೆ ಎಂದರ್ಥ. ಅವರನ್ನು ತಕ್ಷಣ ಕ್ಯಾಬಿನೆಟ್ ನಿಂದ ವಜಾ ಮಾಡಬೇಕು. ಇವರು ಕ್ಯಾಬಿನೆಟ್ ನಲ್ಲಿ ಉಳಿಯಲು ಅರ್ಹರಲ್ಲ ಎಂದು ವಾಟಾಳ್ ನಾಗರಾಜ್ ಹರಿಹಾಯ್ದರು.

ರಮೇಶ್ ಜಾರಕಿಹೊಳಿ ಮೇಲೆ ಸಿಡಿ ಪ್ರಕರಣ ಇದೆ. ಅಸಲಿ ಅಥವ ನಕಲಿ ಏನೇಯಾದ್ರೂ ತನಿಖೆಯಾಗಬೇಕು. ಇದನ್ನು ಸಿಬಿಐ ತನಿಖೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು. 

ಮೋದಿಯನ್ನು ಎದರಿಸುವುದಕ್ಕೆ ಮಮತಾ ಬ್ಯಾನರ್ಜಿ ಸಮರ್ಥವಾಗಿದ್ದಾರೆ. ಪಶ್ವಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನೆ ಅಮಾನವೀಯ. ಪಶ್ಚಿಮ ಬಂಗಾಳದಲ್ಲಿ ದೀದಿ ಗೆಲ್ಲಬೇಕು. ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ವಾಟಾಳ್ ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News