×
Ad

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆಯನ್ನು 'ತಿಪ್ಪೆ ಸಾರಿಸುವ ತನಿಖೆ' ಎಂದ ಕುಮಾರಸ್ವಾಮಿ

Update: 2021-03-11 14:57 IST

ಮೈಸೂರು,ಮಾ.11: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ತಿಪ್ಪೆ ಸಾರಿಸುವ ತನಿಖೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿರುವ ಶಾಸಕ ಸಾ.ರಾ.ಮಹೇಶ್ ಅವರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಮೇಶ್ ಜಾರಕಿ ಹೊಳಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಮಾಡಿಸುವಂತೆ ಹೇಳುತ್ತಿದ್ದಾರೆ. ಯಾರ ವಿರುದ್ಧ ತನಿಖೆ ಮಾಡುತ್ತಾರೆ. ಎಫ್ಎಸ್ಎಲ್ ತನಿಖೆಗಳೆಲ್ಲಾ ಬೋಗಸ್ ತನಿಖೆಗಳು ಎಂದು ಕಿಡಿಕಾರಿದರು.

ಪೊಲೀಸ್ ತನಿಖೆಯಾಗಲಿ, ಯಾವುದಾದರೂ ಸಮಿತಿ ರಚನೆ ಮಾಡಿದ ತನಿಖೆಯಾಗಲಿ ಸ್ವಾತಂತ್ರ್ಯ ಬಂದಾಗಿನಿಂದ ನಡೆದ ಯಾವುದೇ ತನಿಖೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಇದೆಲ್ಲಾ ಒಂದು ರೀತಿಯಲ್ಲಿ ತಿಪ್ಪೆ ಸಾರಿಸುವ ತನಿಖೆಗಳು ಎಂದು ಲೇವಡಿ ಮಾಡಿದರು.

ಸಿಡಿ ಭಯಲಿನ ಹಿಂದೆ ಕಾಂಗ್ರೆಸ್ ನವರು ಇದ್ದಾರೆ ಎಂಬ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಚಿವ ಸೋಮಶೇಖರ್ ಕಾಂಗ್ರೆಸ್ ನಲ್ಲೇ ಇದ್ದವರು. ಅವರಿಗೆ ಬಹುಶಃ ಸಿಡಿ ಹಿಂದೆ ಯಾರಿದ್ದಾರೆ ಎಂದು ಗೊತ್ತಿರಬಹುದು. ಅದನ್ನು ಆವರು ಬಹಿರಂಗಗೊಳಿಸಲಿ ಎಂದು ಹೇಳಿದರು.

ಆರು ಮಂದಿ ಮಹಾನುಭಾವರು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ನೋಡಿ ನಮಗೆ ಆಶ್ಚರ್ಯವಾಯ್ತು. ಸಚಿವರಾದವರು ನಮ್ಮ ತೇಜೋವಧೆ  ಮಾಡುವಂತಹ ಅಪಪ್ರಚಾರಗಳಿಗೆ ಅವಕಾಶ ಕೊಡಬೇಡಿ ಅಂತ ಕೇಳಿಕೊಳ್ಳಬಹುದಿತ್ತು. ಆದರೆ ನಮಗೆ ಸಂಬಂಧಪಟ್ಟ ಸಿಡಿ ವಿಚಾರ ಪ್ರಸಾರ ಮಾಡಬಾರದು ಅಂತ ಕೋರಿದ್ದಾರೆ. ಈ ವಿಚಾರವನ್ನು ವಕೀಲರಿಂದ ಕೇಳಿ ಆಶ್ಚರ್ಯವಾಯ್ತು ಎಂದರು.

ಈ ಆರು ಮಹಾನುಭಾವರು ತಮಗೆ ರಕ್ಷಣೆ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾಗಿದ್ದುಕೊಂಡು ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಲಾರದವರು ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡ್ತಾರೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಒಕ್ಕಲಿಗರ ನಿಗಮಕ್ಕೆ 500 ಕೋಟಿ ರೂ. ಅಲ್ಲ 5 ರೂ. ಗಳನ್ನು ಕೊಡುವುದಿಲ್ಲ ಎಂದು ವಾಗ್ದಾಳಿ ನಡೆಸಿ ಕುಮಾರಸ್ವಾಮಿ, ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಬರಿ ಘೋಷಣೆಯನ್ನಷ್ಟೇ ಮಾಡಿದ್ದಾರೆ. ಯಾವ ಹಣವನ್ನು ಪ್ರತ್ಯೇಕಗೊಳಿಸಿಲ್ಲ, ಪ್ರಾಧಿಕಾರಕ್ಕೆ ಇಷ್ಟು ಅವಧಿಯೊಳಗೆ ಹಣ ನೀಡುತ್ತೇನೆ ಎಂದು ಸಹ ಹೇಳಿಲ್ಲ, ಪೇಪರ್ ನಲ್ಲಿ ಬರೆದಿರುವುದನ್ನು ಓದಿದ್ದಾರೆ ಅಷ್ಟೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನಂಬಿದವರೆಲ್ಲಾ ಬೆನ್ನಿಗೆ ಚಾಕು ಹಾಕುವವರೆ. ಯಾರನ್ನು ನಂಬುತ್ತಾರೊ ಅವರೆಲ್ಲಾ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ. ಜೆಡಿಎಸ್ ಹುಟ್ಟಿದಾಗಿನಿಂದ ಇದೇ ಆಗಿದೆ. ಯಾರನ್ನು ನಂಬುತ್ತಾರೆ ಅವರೇ ಚೂರಿ ಹಾಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಧು ಬಂಗಾರಪ್ಪ ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ ವಿಚಾರ ಕುರಿತು ಮಾತನಾಡಿದ ಕುಮಾರಸ್ವಾಮಿ, ಇದರಲ್ಲಿ ಯಾವುದೇ ವಿಶೇಷ ಇಲ್ಲ, ಒಂದು ವರ್ಷದಿಂದ ಈ ಪ್ರಕ್ರಿಯೆ ನಡೆಯತ್ತಿದೆ. ಈ ಬೆಳವಣಿಗೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ, ಇನ್ನು ಮುಂದೆ ನಿಷ್ಠೆ ಇಲ್ಲದವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ. ಪಕ್ಷ ನಿಷ್ಠೆ ಇಲ್ಲದವರನ್ನು ದೂರ ಇಡಲಾಗುವುದು. ಯಾರು ಪಕ್ಷ ಬಿಟ್ಟು ಹೋಗುತ್ತಾರೊ ಅವರು ಹೋಗಬಹುದು, ಜೆಡಿಎಸ್ ಗೆ ಹಳಬರು ಹೋದರೆ ಹೊಸಬರು ಬರುತ್ತಾರೆ. ಪಕ್ಷ ಬಿಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಮಹಾಶಿವರಾತ್ರಿ ಹಿನ್ನಲೆಯಲ್ಲಿ ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬುಧವಾರ ಚಾಮುಂಡಿ ಬೆಟ್ಟಕ್ಕೆ ತರಳಿ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು. ನಂತರ ನಂಜನಗೂಡಿಗೆ ತೆರಳಿ ಶ್ರೀನಂಜುಂಡೇಶ್ವರ ಸ್ವಾಮಿ ದರ್ಶನ ಪಡೆದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರುಗಳಾದ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯರುಗಳಾದ ಭೋಜೇಗೌಡ, ರಮೇಶ್ ಗೌಡ, ನಗರ ಜೆಡಿಎಸ್ ಅಧ್ಯಕ್ಷ ಚಲುವೇಗೌಡ, ಜೆಡಿಎಸ್ ಮುಖಂಡರುಗಳಾದ ಅಬ್ದುಲ್ಲಾ, ರವಿಕುಮಾರ್, ಪಡುವಾರಹಳ್ಳಿ ಸೋಮು, ವಿವೇಕ, ಬೀರಿಹುಂಡಿ ಬಸವಣ್ಣ, ಬೆಳವಾಡಿ ಶಿವಮೂರ್ತಿ, ಉಮಾಶಂಕರ್, ರಾಮು, ಪ್ರಶಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಸಕ ಜಿ.ಟಿ.ದೇವೆಗೌಡ ಎಲ್ಲಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅವರು ನಮ್ಮ ಪಕ್ಷದ ಸಿಂಬಲ್‍ನಿಂದ ಗೆದ್ದಿರಬಹುದು. ಅವರು ಚುನಾವಣೆಯಲ್ಲಿ ಗೆಲ್ಲಲು ನನ್ನ ಕಾಣಿಕೆಯೂ ಇರಬಹುದು. ಆದರೆ ನಮ್ಮ ಸಭೆಗಳಿಗೆ ಬರುತ್ತಿಲ್ಲ, ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದಾರೆ. ಅವರು ಯಾವ ಪಾರ್ಟಿಯಲ್ಲಿದ್ದಾರೆ ಅಂತ ಅವರೇ ಹೇಳಬೇಕಿದೆ. ಈಗ ಎಲ್ಲಿದ್ದಾರೆ ಮುಂದೆ ಎಲ್ಲಿರುತ್ತಾರೆ ಅನ್ನೋದನ್ನು ಅವರೇ ಸ್ಪಷ್ಟ ಪಡಿಸಬೇಕು.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News