×
Ad

ವಿಜಯನಗರ ಜಿಲ್ಲೆಯಿಂದ ಕಂಪ್ಲಿ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್

Update: 2021-03-11 18:07 IST

ಬೆಂಗಳೂರು, ಮಾ.11: ವಿಜಯನಗರ ನೂತನ ಜಿಲ್ಲೆಯಿಂದ ಕಂಪ್ಲಿ ತಾಲೂಕನ್ನು ಕೈಬಿಟ್ಟಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಈ ಸಂಬಂಧ ಕಂಪ್ಲಿ ವಕೀಲರ ಸಂಘಧ ಕಾರ್ಯಾಧ್ಯಕ್ಷ ಕೆ.ಪ್ರಭಾಕರ್ ರಾವ್ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳು ಹೈಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿವೆ. ಅರ್ಜಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರು, ಭೂಮಾಪನ ಇಲಾಖೆಯನ್ನು ಪ್ರತಿವಾದಿಗಳಾಗಿ ನಮೂದಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಅರ್ಜಿಯಲ್ಲಿ ಏನಿದೆ: ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚಿಸುವ ವೇಳೆ ಕಂಪ್ಲಿ ತಾಲೂಕನ್ನೂ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಲಾಗಿತ್ತು. ಜಿಲ್ಲೆ ಆರಂಭದಲ್ಲಿ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿದ್ದ ಸಂದರ್ಭದಲ್ಲಿಯೂ ಸಾವಿರಾರು ಜನ ಕಂಪ್ಲಿಯನ್ನು ಹೊಸ ಜಿಲ್ಲೆಯಲ್ಲಿ ಸೇರಿಸುವಂತೆ ಕೋರಲಾಗಿತ್ತು.

ಆದರೆ, ಸರಕಾರ 2021ರ ಫೆ.8ರಂದು ಅಧಿಸೂಚನೆ ಹೊರಡಿಸುವ ವೇಳೆ ಕಂಪ್ಲಿಯನ್ನು ನೂತನ ಜಿಲ್ಲೆಯಿಂದ ಕೈಬಿಟ್ಟಿದೆ. ಸರಕಾರದ ಈ ಕ್ರಮ ಕಾನೂನುಬಾಹಿರ. ಭೂ ಕಂದಾಯ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸದೇ, ವಿಚಾರಣೆಯನ್ನೂ ಮಾಡದೇ ರಾಜಕೀಯ ಹಿತಾಸಕ್ತಿ ಪೂರಕವಾಗಿ ಜಿಲ್ಲೆ ರಚಿಸಿರುವುದು ಸರಿಯಲ್ಲ.

ಹೀಗಾಗಿ, ಕಂಪ್ಲಿಯನ್ನು ಹೊಸ ಜಿಲ್ಲೆ ವಿಜಯನಗರಕ್ಕೆ ಸೇರ್ಪಡೆಗೊಳಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಜಿಲ್ಲೆ ರಚನೆ ಸಂಬಂಧ ಮುಂದಿನ ಯಾವುದೇ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News