×
Ad

ಕೇಬಲ್ ನಿಯಂತ್ರಣ ಕಾಯ್ದೆ ನಿಯಮಗಳನ್ನು ಪಾಲಿಸುವಂತೆ ಎಲ್ಲ ಮಾಧ್ಯಮಗಳಿಗೆ ಹೈಕೋರ್ಟ್ ನಿರ್ದೇಶನ

Update: 2021-03-11 21:40 IST

ಬೆಂಗಳೂರು, ಮಾ.11: ನಾಗರಿಕರ ಗೌಪ್ಯತೆಯ ಹಕ್ಕನ್ನು ಟಿವಿ ವಾಹಿನಿಗಳು ಉಲ್ಲಂಘಿಸುತ್ತಿದ್ದು, ಹಕ್ಕನ್ನು ಕಾಪಾಡುವ ಸಲುವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಜಾರಿಗೆ ತರಲು ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಎಲ್ಲ ಮಾಧ್ಯಮಗಳಿಗೆ ನೋಟಿಸ್ ಜಾರಿ ಮಾಡಿದೆ. ಜತೆಗೆ ಕೇಬಲ್ ನಿಯಂತ್ರಣ ಕಾಯ್ದೆ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನ ನೀಡಿದೆ.

ಶಾಸಕ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಮಾಧ್ಯಮಗಳು ವ್ಯಕ್ತಿಯ ಗೌಪ್ಯತೆ ಹಕ್ಕನ್ನು ಉಲ್ಲಂಘಿಸಿವೆ ಎಂದು ನಗರದ ವಕೀಲ ಆತ್ಮ ವಿ. ಹಿರೇಮಠ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಸುದ್ದಿ ಮಾಧ್ಯಮಗಳು ನಾಗರಿಕರ ಗೌಪ್ಯತೆ ಹಕ್ಕನ್ನು ಕಸಿದುಕೊಳ್ಳಬಾರದು ಮತ್ತು ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಂತ್ರಣ ಕಾಯ್ದೆ ನಿಯಮಗಳನ್ನು ಪಾಲಿಸಬೇಕು ಎಂದು ಮಧ್ಯಂತರ ಆದೇಶ ಹೊರಡಿಸಿದೆ. ಜತೆಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಮುದ್ರಣ, ಟಿವಿ, ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳು ಸೇರಿ 73 ಮಾಧ್ಯಮಗಳಿಗೆ ಸೂಚನೆ ನೀಡಿದೆ.

ಅರ್ಜಿದಾರರ ಪರ ವಾದಿಸಿರುವ ವಕೀಲರು, ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸುದ್ದಿ ಮಾಧ್ಯಮಗಳು ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಂತ್ರಣ ಕಾಯ್ದೆ ನಿಯಮಗಳ ವ್ಯಾಪ್ತಿಯನ್ನು ಮೀರಿ ವರ್ತಿಸಿವೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಗೌಪ್ಯತೆ ಹಕ್ಕನ್ನು ಉಲ್ಲಂಘಿಸಿವೆ. ಕಾಯ್ದೆಯ ಸೆಕ್ಷನ್ 5ರ ಪ್ರಕಾರ ಟಿವಿ ಕಾರ್ಯಕ್ರಮಗಳು ಪ್ರೋಗ್ರಾಂ ಕೋಡ್ ನಿಯಮಗಳಿಗೆ ಕಟ್ಟುನಿಟ್ಟಾಗಿ ಇರಬೇಕು ಎಂದು ಪೀಠಕ್ಕೆ ತಿಳಿಸಿದರು.

ಎಲ್ಲ ಮಾಧ್ಯಮಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಇ) ಹಾಗೂ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ನಿಷೇಧ ಸೆಕ್ಷನ್ 4ನ್ನು ಉಲ್ಲಂಘಿಸಿವೆ. ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸದೆ ಪ್ರಸಾರ ಮಾಡಿರುವುದು ಗೌಪ್ಯತೆ ಹಕ್ಕಿನ ಉಲ್ಲಂಘನೆಯಾಗಿದೆ. ಹೀಗಾಗಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಜಾರಿಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಜತೆಗೆ ಖಾಸಗಿತನದ ಹಕ್ಕು ಕಸಿದುಕೊಂಡಿರುವ ಮಾಧ್ಯಮಗಳ ವಿರುದ್ಧ ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 19ರ ಅಡಿ ಕಾನೂನು ಕ್ರಮ ಜರುಗಿಸಲು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸುವಂತೆಯೂ ಕೋರಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News