×
Ad

ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಕಾಂಗ್ರೆಸ್ ಕಾಲಹರಣ: ಸಚಿವ ಶ್ರೀರಾಮುಲು

Update: 2021-03-11 22:01 IST

ಬಳ್ಳಾರಿ, ಮಾ.11: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ ಮೇಲಿನ ಚರ್ಚೆಗೆ ಬನ್ನಿ ಎಂದು ಕರೆದರೆ ಸದನದಿಂದಲೇ ಹೊರ ನಡೆಯುತ್ತಾರೆ. ಇಲ್ಲ ಧರಣಿ ಮಾಡಲು ಕುಳಿತುಕೊಳ್ಳುತ್ತಾರೆ. ಇದೆಲ್ಲ ಕಾಂಗ್ರೆಸ್ ಮಾಡುತ್ತಿರೋ ಗೇಮ್ ಪ್ಲಾನ್ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.       

ಗುರುವಾರ ಬಳ್ಳಾರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಭದ್ರಾವತಿ ಶಾಸಕ ಸಂಗಮೇಶ ಅವರ ಹಕ್ಕುಚ್ಯುತಿ ವಿಚಾರದಲ್ಲಿ ಚರ್ಚೆ ಮಾಡುತ್ತಿಲ್ಲ. ಕೇವಲ ಗಲಾಟೆ ಎಬ್ಬಿಸಿ ಸದನ ನಡೆಯದಂತೆ ಮಾಡುವುದು ಕಾಂಗ್ರೆಸ್ ಕೆಲಸವಾಗಿದೆ. ಅವರು ತಮ್ಮ ಹಳೇ ಚಾಳಿಯನ್ನು ಈ ಬಾರಿಯೂ ಸದನದಲ್ಲಿ ಮುಂದುವರಿಸಿದ್ದಾರೆ ಎಂದು ಹೇಳಿದರು.

ಸರಕಾರ ಯಾವುದೇ ಚರ್ಚೆಗೂ ಸಿದ್ಧವಿದೆ. ಆದರೆ, ಯಾವ ಚರ್ಚೆಗೂ ಕಾಂಗ್ರೆಸ್ ಸಿದ್ಧವಿಲ್ಲ. ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮೀಸಲಾತಿ ವಿಚಾರದಲ್ಲಿ ಸುಭಾಷ್ ಅಡಿ ಅವರ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯು ಕುರುಬ, ಎಸ್ಟಿ, ಪಂಚಮಸಾಲಿಗಳ ವಿಚಾರದಲ್ಲಿ ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸಲಿ ಎಂದರು.  

ಅನುಮಾನ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ

‘ಅಶ್ಲೀಲ ವಿಡಿಯೋ ವಿಚಾರದಲ್ಲಿ ಎಲ್ಲರಿಗೂ ನೋವಾಗಿದೆ. ಹೀಗಾಗಿ, ಸಚಿವ ಎಸ್.ಟಿ.ಸೋಮಶೇಖರ್ ಕೂಡ ಕಾಂಗ್ರೆಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಮಾನ ವ್ಯಕ್ತಪಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆ ಕಾರಣಕ್ಕೆ ನಾನೂ ಅನುಮಾನ ವ್ಯಕ್ತಪಡಿಸಿದ್ದೇನೆ ಎಂದರು.   

-ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News