ಪ್ರವಾಸಿ ತಾಣಗಳಲಿ ತ್ರಿ ಸ್ಟಾರ್ ಹೊಟೇಲ್ ನಿರ್ಮಾಣ: ಸಿ.ಪಿ.ಯೋಗೇಶ್ವರ್

Update: 2021-03-11 17:31 GMT

ಬೆಂಗಳೂರು, ಮಾ.11: ರಾಜ್ಯದ ಪ್ರಮುಖ ನಾಲ್ಕು ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ನಾಲ್ಕು ತ್ರಿಸ್ಟಾರ್ ಹೊಟೇಲ್‍ಗಳನ್ನು ನಿರ್ಮಾಣ ಮಾಡಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. 

ಈ ಕುರಿತು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರೈಟ್ಸ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಬೇಲೂರು, ಬಾದಾಮಿ, ವಿಜಯಪುರ ಹಾಗೂ ಹಂಪಿಯಲ್ಲಿ ತ್ರಿಸ್ಟಾರ್ ಹೊಟೇಲ್‍ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊಟೇಲ್ ನಿರ್ಮಾಣಕ್ಕೆ ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಾಗುವುದು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪ್ರವಾಸಿಗರ ಸೇವೆಗೆ ಸಮರ್ಪಿಸಲಾಗುವುದು. ಇದರಿಂದ ರಾಜ್ಯವೂ ಒಳಗೊಂಡಂತೆ ಹೊರ ರಾಜ್ಯ, ಹೊರ ದೇಶದ ಪ್ರವಾಸಿಗರನ್ನು ಕರ್ನಾಟಕದ ಪ್ರವಾಸೋದ್ಯಮದತ್ತ ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೊಟೇಲ್ ನಿರ್ಮಾಣದ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಆಗಬಾರದು. ಸುಂದರವಾದ ವಿನ್ಯಾಸದೊಂದಿಗೆ ನಿಗದಿಪಡಿಸಿದ ಸಮಯದಲ್ಲಿ ಹೊಟೇಲ್‍ಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕೆಂದು ರೈಟ್ಸ್ ಕಂಪನಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ಕಂಪನಿಯ ಹಿರಿಯ ಉಪಪ್ರಧಾನ ವ್ಯವಸ್ಥಾಪಕ ಎಂ.ಜಿ.ಸುದೀಪ್, ವಾಸ್ತುಶಿಲ್ಪಿ ಬಾಲಯ್ಯ, ವ್ಯವಸ್ಥಾಪಕಿ ನೇಹಾ ಜೈನ್ ಹಾಗೂ ಎಂಜಿನಿಯರ್ ಗಿರೀಶ್, ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮಾ, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್‍ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News