×
Ad

ಕೊರೋನ ಲಸಿಕೆ ಪಡೆದ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಸುಧಾಕರ್

Update: 2021-03-12 18:18 IST

ಬೆಂಗಳೂರು, ಮಾ. 12: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪಿಎಂಎಸ್‍ಎಸ್‍ವೈ ಘಟಕದಲ್ಲಿ ಯಡಿಯೂರಪ್ಪನವರು ಕೊರೋನ ಲಸಿಕೆ ಪಡೆದುಕೊಂಡರು. ಇದೇ ವೇಳೆ ಫ್ರಂಟ್‍ಲೈನ್ ವಾರಿಯರ್ಸ್ ಕೋಟಾದಡಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕೋವಿಡ್-19 ಸೋಂಕು ತಡೆ ಲಸಿಕೆಯನ್ನು ತೆಗೆದುಕೊಂಡರು.

ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆಗೆ ಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ನಾನು ಕೊರೋನ ಲಸಿಕೆ ಹಾಕಿಸಿಕೊಳ್ಳುತ್ತಿದ್ದೇನೆ. ಪ್ರಧಾನಿ ಮೋದಿ ಮತ್ತವರ ತಾಯಿಯೂ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ, ನಾನು ರಾಜ್ಯದ ಜನತೆಗೆ ಕರೆ ನೀಡುತ್ತಿದ್ದೇನೆ. ಕೊರೋನ ಲಸಿಕೆ ಪಡೆಯುವುದರಿಂದ ಯಾವುದೇ ವ್ಯತಿರಿಕ್ತ ಸಮಸ್ಯೆ ಆಗುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

‘ಕೊರೋನ ಲಸಿಕೆ ಪಡೆದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು 30 ನಿಮಿಷಗಳ ಕಾಲ ವೈದ್ಯರು ನಿಗಾದಲ್ಲಿ ಇರಿಸಿದರು. ಆ ಬಳಿಕ ಮಾತನಾಡಿದ ಯಡಿಯೂರಪ್ಪ, ಲಸಿಕೆ ಹಾಕಿಸಿಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ. ನಾನು ದೇಸಿ ಲಸಿಕೆ ಹಾಕಿಸಿಕೊಂಡಿದ್ದೇನೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ. ಲಸಿಕೆ ಹಾಕಿಸಿಕೊಂಡ ಬಳಿಕ ಇಪ್ಪತ್ತು ನಿಮಿಷ ಕೂರಲು ವೈದ್ಯರು ಹೇಳ್ತಾರೆ ಅಷ್ಟೇ ಎಂದು ವಿವರಣೆ ನೀಡಿದರು.

ಕರ್ಫ್ಯೂ ಚಿಂತನೆ ಇಲ್ಲ: ಬೆಂಗಳೂರು ನಗರದಲ್ಲಿ ಕೊರೋನ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಒಪ್ಪಿಕೊಳ್ಳುತ್ತೇನೆ. ಕೊರೋನ ಸೋಂಕು ತಡೆಗೆ ಶೀಘ್ರವೇ ಮುಖ್ಯಮಂತ್ರಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಅಗತ್ಯ ಕ್ರಮ ವಹಿಸುವ ಬಗ್ಗೆ ಸೂಚನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ರಾಜ್ಯದಲ್ಲಿ ಕೊರೋನ ಸೋಂಕು ತಡೆಗೆ ಬಿಗಿ ಕ್ರಮ ಅವಶ್ಯವಾಗಿದೆ. ಹೀಗಾಗಿ ಮುಖ್ಯಮಂತ್ರಿ ವೀಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವ ಸಾಧ್ಯತೆಗಳಿವೆ. ಆದರೆ, ರಾತ್ರಿದಲ್ಲಿ ಸದ್ಯಕ್ಕೆ ರಾತ್ರಿ ಕರ್ಫ್ಯೂ ಹೇರುವ ಸಂಬಂಧ ಇನ್ನೂ ಯಾವುದೇ ಚಿಂತನೆ ನಡೆಸಿಲ್ಲ ಎಂದು ಸುಧಾಕರ್ ಇದೇ ವೇಳೆ ಸ್ಪಷ್ಟಪಡಿಸಿದರು.

ನಗರದಲ್ಲಿ ಪ್ರತಿದಿನ 300 ರಿಂದ 400 ಕೋರೋನ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. ಸದ್ಯ ಸೋಂಕು ನಿಯಂತ್ರಣದಲ್ಲಿದೆ. ನೆರೆಯ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಸೋಂಕಿನ ಏರಿಕೆ ಪ್ರಮಾಣ ಕಡಿಮೆ ಇದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡುವುದರ ಜೊತೆಗೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು ಎಂದು ಡಾ.ಸುಧಾಕರ್ ಸಲಹೆ ನೀಡಿದರು.

ಯಡಿಯೂರಪ್ಪ ಅವರು ದೇಶೀಯ ಲಸಿಕೆಯನ್ನು ಪಡೆದಿದ್ದಾರೆ. ವೈದ್ಯರ ಸಲಹೆಯಂತೆ ಅರ್ಧಗಂಟೆ ವಿಶ್ರಾಂತಿ ಪಡೆದಿದ್ದಾರೆ. ರಕ್ತದೊತ್ತಡ, ಸಕ್ಕರೆ ಅಂಶ ಯಾವುದೂ ಹೆಚ್ಚಿಲ್ಲ. ಯಾವುದೇ ಅಡ್ಡಪರಿಣಾಮ ಇಲ್ಲ. ಲಸಿಕೆ ಪಡೆದು ರಾಜ್ಯದ ಜನತೆಗೂ ಸಿಎಂ ಸ್ಪಷ್ಟ ಸಂದೇಶ ನೀಡಿದ್ದಾರೆ. 60 ವರ್ಷ ಮೇಲ್ಪಟ್ಟವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು 50 ಲಕ್ಷ ಜನ ಇದ್ದಾರೆ. 45 ವರ್ಷ ಮೇಲ್ಪಟ್ಟವರು ಅನಾರೋಗ್ಯಕ್ಕೆ ಒಳಗಾಗಿದ್ದರೆ ಅವರೂ ಲಸಿಕೆ ಪಡೆಯಿರಿ ಎಂದು ಸುಧಾಕರ್ ಸೂಚಿಸಿದರು.

ಸಮಸ್ಯೆ ಆಗುವುದಿಲ್ಲ: ‘ಕೊರೋನ ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಪ್ರಧಾನಿ ಮೋದಿಯವರು ಮತ್ತವರ ತಾಯಿಯೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ, ನಾನು ರಾಜ್ಯದ ಜನತೆಗೆ ಕರೆ ನೀಡುತ್ತಿದ್ದೇನೆ. ಕೊರೋನ ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಸಂತಸವಾಗುತ್ತಿದೆ

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಕೊರೋನ ಲಸಿಕೆಯ ಮೊದಲನೇ ಡೋಸ್ ಪಡೆದೆ ಎಂದು ಹಂಚಿಕೊಳ್ಳಲು ಸಂತಸವಾಗುತ್ತಿದೆ. ಎಲ್ಲ ಹಿರಿಯ ನಾಗರಿಕರು, ಅರ್ಹ ವ್ಯಕ್ತಿಗಳು ಆದಷ್ಟು ಬೇಗ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬೇಕೆಂದು ಕೋರುತ್ತೇನೆ. ಭಾರತ ಮತ್ತು ಕರ್ನಾಟಕ ರಾಜ್ಯವನ್ನು ಕೊರೋನ ಸೋಂಕು ಮುಕ್ತವಾಗಿಸಲು ನಾವೆಲ್ಲರೂ ಕೈಜೋಡಿಸೋಣ. ಇಂದು ಕೊರೋನ ಲಸಿಕೆಯ ಮೊದಲನೇ ಡೋಸ್ ಪಡೆದೆ ಎಂದು ಹಂಚಿಕೊಳ್ಳಲು ಸಂತಸವಾಗುತ್ತಿದೆ'

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News