ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Update: 2021-03-12 17:06 GMT

ಬೆಂಗಳೂರು, ಮಾ.12: ಕೇಂದ್ರ ಸಾಹಿತ್ಯ ಅಕಾಡೆಮಿಯು 2020ನೆ ಸಾಲಿನ ವಾರ್ಷಿಕ ಪುರಸ್ಕಾರಗಳನ್ನು ಶುಕ್ರವಾರ ಪ್ರಕಟಿಸಿದ್ದು, ಕನ್ನಡ ಭಾಷಾ ವಿಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅವರ ‘ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ.

ಅದೇ ರೀತಿ ಬಾಲ ಸಾಹಿತ್ಯ ಪುರಸ್ಕಾರ ವಿಭಾಗದಲ್ಲಿ ‘ನಾನೂ ಅಂಬೇಡ್ಕರ್’ ಕಾದಂಬರಿಗಾಗಿ ಲೇಖಕ ಹ.ಸ.ಬ್ಯಾಕೋಡ ಮತ್ತು ಯುವ ಪುರಸ್ಕಾರ ವಿಭಾಗದಲ್ಲಿ ‘ಧೂಪದ ಮಕ್ಕಳು’ ಸಣ್ಣ ಕಥೆಗಳಿಗಾಗಿ ಲೇಖಕ ಕೆ.ಎಸ್.ಮಹದೇವಸ್ವಾಮಿ(ಸ್ವಾಮಿ ಪೊನ್ನಾಚ್ಚಿ) ಅವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಭಾಷಾ ವಿಭಾಗದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ ಅರವಿಂದ ಮಾಲಗತ್ತಿ, ಡಾ.ಪದ್ಮಾ ಪ್ರಸಾದ್ ಹಾಗೂ ಡಾ.ಎಸ್.ಜಿ.ಸಿದ್ದರಾಮಯ್ಯ ಇದ್ದರು. ಬಾಲ ಸಾಹಿತ್ಯ ಪುರಸ್ಕಾರ ವಿಭಾಗದ ಆಯ್ಕೆ ಸಮಿತಿಯಲ್ಲಿ ಬೇಳೂರು ರಘುನಂದನ್, ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಟಿ.ಪಿ.ಅಶೋಕ್ ಹಾಗೂ ಯುವ ಪುರಸ್ಕಾರ ವಿಭಾಗದ ಆಯ್ಕೆ ಸಮಿತಿಯಲ್ಲಿ ಡಾ.ಎಚ್.ಎಲ್.ಪುಷ್ಪ, ಡಾ.ಕುಂ.ವೀರಭದ್ರಪ್ಪ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಇದ್ದರು.

(ಕೆ.ಎಸ್.ಮಹದೇವಸ್ವಾಮಿ)

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಒಂದು ಲಕ್ಷ ರೂ.ನಗದು, ತಾಮ್ರದ ಪ್ರಶಸ್ತಿ ಫಲಕ, ಬಾಲ ಸಾಹಿತ್ಯ ಪುರಸ್ಕಾರ 50 ಸಾವಿರ ರೂ.ನಗದು ಹಾಗೂ ತಾಮ್ರದ ಪ್ರಶಸ್ತಿ ಫಲಕ ಹಾಗೂ ಯುವ ಪುರಸ್ಕಾರ 50 ಸಾವಿರ ರೂ.ನಗದು ಹಾಗೂ ತಾಮ್ರದ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದ ಆಯೋಜನೆ ಕುರಿತು ನಂತರ ತಿಳಿಸುವುದಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗಳ ಬಗ್ಗೆ ಗಮನ ಕೊಡದೆ ನಾವು ನಮ್ಮ ಕರ್ತವ್ಯ ಮಾಡಿಕೊಂಡು ಬಂದಿದ್ದೇವೆ. ಮಹಾಕಾವ್ಯ ದೊಡ್ಡದು. ಸಾಹಿತ್ಯ ಚಿಕ್ಕಂದಿನಿಂದಲೇ ಬೆಳೆಸಿಕೊಂಡಿದ್ದ ಅಭ್ಯಾಸ. ರಾಜಕಾರಣದ ನಡುವೆಯೂ ಸಾಹಿತ್ಯದ ಆಸಕ್ತಿ ಕಡಿಮೆಯಾಗಲಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ ನನ್ನ ಮಹಾಕಾವ್ಯವನ್ನು ಗುರುತಿಸಿ, ಈ ಮನ್ನಣೆ ಕೊಟ್ಟಿದ್ದು ಆ ಕಾವ್ಯಕ್ಕೆ ಸಿಕ್ಕ ಪುರಸ್ಕಾರ.

-ಎಂ.ವೀರಪ್ಪ ಮೊಯ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಖುಷಿಯಾಯಿತು. ನಿರೀಕ್ಷೆ ಮಾಡಿರಲಿಲ್ಲ. ಧೂಪದ ಮಕ್ಕಳು ಹೆಸರು ಮಾಡಬೇಕು ಎಂಬ ಆಸೆ ಅಷ್ಟೆ.

-ಕೆ.ಎಸ್.ಮಹದೇವಸ್ವಾಮಿ (ಸ್ವಾಮಿ ಪೊನ್ನಾಚ್ಚಿ), ಯುವ ಪುರಸ್ಕಾರ ಪುರಸ್ಕೃತರು

ಸುಮಾರು 20 ವರ್ಷದಿಂದ ನಾನು ಮಕ್ಕಳಿಗಾಗಿ ಪುಸ್ತಕಗಳನ್ನು ಬರೆಯುತ್ತಿದ್ದೇನೆ. ನಾನು 10ನೆ ತರಗತಿಯಲ್ಲಿದ್ದಾಗ ಮೊದಲ ಮಕ್ಕಳ ಪುಸ್ತಕ ಪ್ರಕಟವಾಯಿತು. ಆನಂತರ, ವರ್ಷಕ್ಕೆ ಒಂದು ಅಥವಾ ಎರಡು ಪುಸ್ತಕಗಳನ್ನು ಮಕ್ಕಳಿಗಾಗಿ ಬರೆಯುತ್ತಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಇಷ್ಟು ಬೇಗ ನನಗೆ ಪ್ರಶಸ್ತಿ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಪುಸ್ತಕ ವಿಭಾಗದಲ್ಲಿ ನನಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ.

-ಹ.ಸ. ಬ್ಯಾಕೋಡ, ಬಾಲ ಸಾಹಿತ್ಯ ಪುರಸ್ಕಾರ ಪುರಸ್ಕೃತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News