×
Ad

ಅಶ್ಲೀಲ ಸಿಡಿ ಪ್ರಕರಣ: ಯುವತಿ, ಪತ್ರಕರ್ತರು ಸೇರಿ ಐವರನ್ನು ವಶಕ್ಕೆ ಪಡೆದ ಪೊಲೀಸರು

Update: 2021-03-12 19:25 IST
ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾ.12: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಅಶ್ಲೀಲ ಸಿಡಿ ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದ ಅಧಿಕಾರಿಗಳ ತಂಡವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕಟಿಸಿದ ಬೆನ್ನಲ್ಲೇ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಓರ್ವ ಯುವತಿ, ಪತ್ರಕರ್ತರು, ಹ್ಯಾಕಿಂಗ್ ಮಾಡುತ್ತಿದ್ದವರು ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಶೇಷ ತನಿಖಾ ತಂಡ(ಎಸ್‌ಐಟಿ)ದಲ್ಲಿ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್, ಅಪರಾಧ ವಿಭಾಗದ ಡಿಸಿಪಿ ರವಿ ಕುಮಾರ್ ಇರಲಿದ್ದಾರೆ. ಸಿಸಿಬಿ ಎಸಿಪಿ ಧರ್ಮೇಂದ್ರ ಪ್ರಕರಣದ ತನಿಖಾಧಿಕಾರಿಯಾಗಿದ್ದು, ಇವರ ಜೊತೆಗೆ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಕಬ್ಬನ್‌ಪಾರ್ಕ್ ಇನ್‌ಸ್ಪೆಕ್ಟರ್ ಮಾರುತಿ ಸಹ ವಿಶೇಷ ತನಿಖಾ ತಂಡದಲ್ಲಿದ್ದಾರೆ. 

ರಚನೆಯಾಗಿರುವ ಎಸ್‌ಐಟಿ ತನಿಖೆ ಶುರು ಮಾಡಿದೆ. ಈಗಾಗಲೇ ಪ್ರಾಥಮಿಕ ಮಾಹಿತಿಯನ್ನೂ ಕಲೆ ಹಾಕಿದೆ. ವಿಚಾರಣೆ ವೇಳೆ ಅಗತ್ಯಬಿದ್ದರೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಿದ್ದೇವೆ. ಈ ಮೂಲಕ ಸಿಡಿ ಪ್ರಕರಣ ಸಂಬಂಧ ಆದಷ್ಟು ಬೇಗ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಎಫ್‌ಐಆರ್ ದಾಖಲಿಸಿಲ್ಲ: ಸರಕಾರದ ಆದೇಶದಂತೆ ಪೊಲೀಸ್ ಇಲಾಖೆ ಎಸ್‌ಐಟಿಯನ್ನು ರಚಿಸಿದ್ದು, ಈ ತಂಡದಲ್ಲಿ ಏಳು ಮಂದಿ ಅಧಿಕಾರಿಗಳು ಇರಲಿದ್ದಾರೆ. ಈ ತಂಡವು ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ಕಾಲ್ ರೆಕಾರ್ಡ್ಸ್ ಆಧಾರದಲ್ಲಿ ವಶಕ್ಕೆ: ಐವರನ್ನು ಕಾಲ್ ರೆಕಾರ್ಡ್ಸ್ ಹಾಗೂ ಹಣದ ವಹಿವಾಟಿನ ಆಧಾರದಲ್ಲಿ ಮೇಲೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪೊಲೀಸರ ವಶದಲ್ಲಿರುವ ಯುವತಿಯೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಅಶ್ಲೀಲ ವಿಡಿಯೋ ಕೊಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕಾಫಿನಾಡಿನ ನಂಟು?

ರಾಜ್ಯ ಸರಕಾರದ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಅಶ್ಲೀಲ ಸಿಡಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್‌ಐಟಿ ತನಿಖಾಧಿಕಾರಿಗಳ ತಂಡ ಶುಕ್ರವಾರ ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಪತ್ರಕರ್ತರೊಬ್ಬರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ಶುಕ್ರವಾರ ಬೆಳಗ್ಗೆ ತಾಲೂಕಿನ ಆಲ್ದೂರು ಪಟ್ಟಣಕ್ಕೆ ಆಗಮಿಸಿದ್ದ ಎಸ್‌ಐಟಿ ತನಿಖಾ ತಂಡದ ಅಧಿಕಾರಿಗಳು ಪಟ್ಟಣ ಸಮೀಪದಲ್ಲಿರುವ ದೋಣಗುಡಿಗೆ ಗ್ರಾಮದಲ್ಲಿ ಭವಿತ್ ದೋಣಗುಡಿಗೆ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಭವಿತ್ ದೋಣಗುಡಿಗೆ ಈ ಹಿಂದೆ ಪಬ್ಲಿಕ್ ಟಿವಿ, ಸಮಯ ಟಿವಿ, ಬಿಟಿವಿ ಸೇರಿದಂತೆ ಹಲವು ಖಾಸಗಿ ಸುದ್ದಿವಾಹಿನಿಗಳಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದು, ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ ಪ್ರಕರಣವಾಗಿದ್ದು, ಸಿಡಿ ಬಿಡುಗಡೆಯಾದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಇತ್ತೀಚೆಗೆ ಎಸ್‌ಐಟಿಗೆ ನೀಡಿದ್ದು, ತನಿಖಾ ಸಂಸ್ಥೆಯ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಪತ್ರಕರ್ತ ಭವಿತ್ ಬೆಂಗಳೂರಿನಿಂದ ಆಲ್ದೂರಿನ ದೋಣಗುಡಿಗೆ ಗ್ರಾಮದಲ್ಲಿರುವ ತನ್ನ ಮನೆಗೆ ಎರಡು ದಿನಗಳ ಹಿಂದೆ ಬಂದಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News