ಗೀತಾ ಶಿವರಾಜ್‍ಕುಮಾರ್ ಕೂಡಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ: ಮಧು ಬಂಗಾರಪ್ಪ

Update: 2021-03-12 14:54 GMT

ಬೆಂಗಳೂರು, ಮಾ. 12: ‘ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಜೆಡಿಎಸ್ ಪಕ್ಷವಾಗಿ ಅವರ ಕೆಲಸ ಅವರು ಮಾಡಲಿ. ನಾನು ನಮ್ಮ ಪಕ್ಷ ಬಲಪಡಿಸಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಯಾರನ್ನೂ ಗುರಿಯಾಗಿಸಿ ಕೆಲಸ ಮಾಡುತ್ತಿಲ್ಲ. ರಾಜಕೀಯದಲ್ಲಿ ನಾವು ಪಕ್ಷವನ್ನು ಬೆಳೆಸದಿದ್ದರೆ, ಕವಲುದಾರಿಗೆ ಬಂದು ನಿಲ್ಲುತ್ತದೆ. ಬಿಜೆಪಿಯನ್ನು ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದಿಂದ ದೂರ ಇಡುವುದಷ್ಟೇ ನಮ್ಮ ಗುರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸಂಬಂಧ 'ಅವರು ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಧು ಅವರು ಹುಟ್ಟಿನಿಂದಲೇ, ರಕ್ತಗತವಾಗಿ ಕಾಂಗ್ರೆಸಿಗರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಅವರಿಗೆ ಹೊಸದಲ್ಲ ಎಂದರು.

ತನಿಖೆ ಆಗಲಿ: ಸಿಡಿ ಪ್ರಕರಣದ ವಿಚಾರಣೆಗೆ ಎಸ್‍ಐಟಿ ರಚಿಸಿದ್ದಾರೆ. ನೋಡೋಣ ಏನು ಮಾಡುತ್ತಾರೆ. ಸಿಡಿ ನಕಲಿ ಅಂದಿದ್ದಾರೆ. ನಮ್ಮ ಪಕ್ಷದ ಹೆಸರನ್ನು ಎತ್ತಿದ್ದಾರೆ. ಈ ವಿಚಾರ ಸಾರ್ವಜನಿಕವಾಗಿದ್ದು, ಎಲ್ಲ ಪರೀಕ್ಷೆಯನ್ನು ನಡೆಸಲಿ. ವಿಡಿಯೋದಲ್ಲಿರುವುದು ರಮೇಶ್ ಜಾರಕಿಹೊಳಿಯೋ ಅಲ್ಲವೋ ಎಂಬುದಕ್ಕಿಂತ, ಯಡಿಯೂರಪ್ಪ ಭ್ರಷ್ಟ, ಕನ್ನಡಿಗರು, ಮಾಧ್ಯಮಗಳ ನಿಂದನೆ, ಬೆಳಗಾವಿ ಪ್ರತ್ಯೇಕ ರಾಜ್ಯ ಎಂದಿದ್ದಾರೆ. ಇವೆಲ್ಲವೂ ಗಂಭೀರ ವಿಚಾರಗಳಾಗಿವೆ. ಇವುಗಳ ಬಗ್ಗೆ ಚರ್ಚೆ ಆಗಬೇಕು. ಅವರು ನಮ್ಮ ಮೇಲೆ ಏನೇ ಆರೋಪ ಮಾಡಲಿ, ಈ ವಿಚಾರ ತನಿಖೆಯಾಗಲಿ ಎಂಬುದಷ್ಟೇ ನಮ್ಮ ಆಗ್ರಹ ಎಂದು ಹೇಳಿದರು.

ಗೀತಾ ಕಾಂಗ್ರೆಸ್ ಸೇರ್ಪಡೆ: ‘ನಾನು ನಿನ್ನೆಯಿಂದಲೇ ಕಾಂಗ್ರೆಸಿಗನಾಗಿ ನನ್ನ ಕಾರ್ಯ ಆರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಅಕ್ಕ ಗೀತಾ ಶಿವರಾಜಕುಮಾರ್ ಅವರೂ ಕಾಂಗ್ರೆಸ್ ಸೇರುವ ಬಗ್ಗೆ ನಿರ್ಧರಿಸಿದ್ದಾರೆ. ಅಧ್ಯಕ್ಷರು ಸೇರಿ ಎಲ್ಲರೂ ಈ ಬಗ್ಗೆ ಅಧಿಕೃತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮಧು ಬಂಗಾರಪ್ಪ ಇದೇ ವೇಳೆ ತಿಳಿಸಿದರು.

ಈ ಹಿಂದಿನ ಪಕ್ಷದ ಬಗ್ಗೆ ನಾನು ಹೆಚ್ಚು ವಿಶ್ಲೇಷಣೆಯಾಗಲಿ, ಚರ್ಚೆಯಾಗಲಿ ಮಾಡುವುದಿಲ್ಲ. ಬಂಗಾರಪ್ಪನವರಿಗೆ ಸಿಎಂ ಆಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದು ಕಾಂಗ್ರೆಸ್ ಹಾಗೂ ನನಗೆ ಇಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ. ಅಧಿಕಾರ ಸಿಗಲೇಬೇಕು ಎಂದು ಅಲ್ಲ. ರಾಜ್ಯದಲ್ಲಿ ನಾಯಕರಾಗಿ ಬೆಳೆಯಲು ಅವಕಾಶ ಕಲ್ಪಿಸುವುದು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಕುಮಾರಸ್ವಾಮಿ ಅವರಿಗೆ ಅಣ್ಣನ ಸ್ಥಾನಕ್ಕೆ ನೀಡುವ ಗೌರವ ಕೊಡುತ್ತೇನೆ. ಹೀಗಾಗಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. 10 ವರ್ಷ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ತಿಳಿಸಿದರು.

ಗೀತಾ ಸಾಧಾರಣ ಮಹಿಳೆ ಅಲ್ಲ

‘ಗೀತಾ ಶಿವರಾಜ್ ಕುಮಾರ್ ಅವರು ಸಾಮಾನ್ಯ ಮಹಿಳೆ ಅಲ್ಲ. ಪಕ್ಷ ಕಷ್ಟಕಾಲದಲ್ಲಿದ್ದಾಗ ಅದಕ್ಕಾಗಿ ಹೋರಾಟ ಮಾಡಿದವರು. ಗೌರವಾನ್ವಿತ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಗೆ ಅವರದೇ ಆದ ಗೌರವವನ್ನು ನಾವು ನೀಡಬೇಕು. ಈ ಬಗ್ಗೆ ನಾನು ದೆಹಲಿ ನಾಯಕರೊಂದಿಗೆ ಚರ್ಚಿಸಿ, ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಅವರೊಂದಿಗೆ ನಾವು ಚರ್ಚಿಸುತ್ತೇವೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News