ಮಂಗಳೂರು ವಿಮಾನ ದುರಂತ: ಖಾಸಗಿ ದೂರು ರದ್ದುಗೊಳಿಸಿದ ಹೈಕೋರ್ಟ್

Update: 2021-03-12 14:38 GMT

ಬೆಂಗಳೂರು, ಮಾ.12: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ 2010ರಲ್ಲಿ ನಡೆದಿದ್ದ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಏರ್ ಇಂಡಿಯಾ ಲಿಮಿಟೆಡ್ ಮತ್ತು ಅಧಿಕಾರಿಗಳ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರು ಮತ್ತು ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ. 

ಖಾಸಗಿ ದೂರು ಪರಿಗಣಿಸಿದ್ದ(ಕಾಗ್ನಿಜೆನ್ಸ್) ಮಂಗಳೂರು 2ನೆ ಜೆಎಂಎಫ್‍ಸಿ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿ ಪೀಟರ್ ಅಬ್ರಹಾಂ, ಏರ್ ಇಂಡಿಯಾ ಅಧಿಕಾರಿ ಆನ್ಸ್‍ಬರ್ಟ್ ಡಿಸೋಜಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಜಿ. ನಿಜಗಣ್ಣನವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರನ್ನು ಮತ್ತು 2ನೆ ಜೆಎಂಎಫ್‍ಸಿ ನ್ಯಾಯಾಲಯ ನಡೆಸುತ್ತಿದ್ದ ವಿಚಾರಣೆಯನ್ನು ರದ್ದುಗೊಳಿಸಿತು.

ಮೇ 22, 2010ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, 158 ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ವಿಚಾರವಾಗಿ 2012ರ ಮಾ.6ರಂದು ಮಂಗಳೂರು ಮೂಲದ ಫೌಂಡೇಷನ್ ಖಾಸಗಿ ದೂರು ದಾಖಲಿಸಿತ್ತು.

ವಿಮಾನ ನಿಲ್ದಾಣವು ಐಸಿಎಒ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಿಸಲು ಯೋಗ್ಯವಾಗಿರಲಿಲ್ಲ. ಅದರೂ ವೈಮಾನಿಕ ಚಟುವಟಿಕೆ ನಡೆಯುತ್ತಿತ್ತು. ಏರ್ ಇಂಡಿಯಾ ಪ್ರಾಧಿಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News