ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮುಹಮ್ಮದ್ ಗೌಸ್ ಶುಕೂರ್ ಕಮಾಲ್ ನೇಮಕ
Update: 2021-03-12 21:52 IST
ಬೆಂಗಳೂರು, ಮಾ.12: ರಾಜ್ಯ ಹೈಕೋರ್ಟ್ ಗೆ ನೂತನ ನ್ಯಾಯಮೂರ್ತಿಯಾಗಿ ಕೊಡಗು ಜಿಲ್ಲೆಯ ಕೊಡ್ಲಪೇಟೆಯ ವಕೀಲ ಮುಹಮ್ಮದ್ ಗೌಸ್ ಶುಕೂರ್ ಕಮಾಲ್ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಕೇಂದ್ರ ಕಾನೂನು ಸಚಿವಾಲಯ ಮಾ.12ರಂದು ಪ್ರಕಟಣೆ ಹೊರಡಿಸಿದ್ದು, ರಾಷ್ಟ್ರಪತಿಗಳ ಆದೇಶಾನುಸಾರ ರಾಜ್ಯ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ 2019ರ ಮಾ. 25ರಂದು ಇವರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ಎರಡು ವರ್ಷಗಳ ಬಳಿಕ ಅಂತಿಮವಾಗಿ ನ್ಯಾಯಮೂರ್ತಿ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.
ಮುಹಮ್ಮದ್ ಗೌಸ್ ವಕೀಲರಾಗಿ ರಾಜ್ಯ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಿವಿಲ್, ಕ್ರಿಮಿನಲ್, ಸಂವಿಧಾನ, ಕಾರ್ಮಿಕ, ಕಂದಾಯ ಹಾಗೂ ವಕ್ಫ್ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ.