×
Ad

ಸಿಡಿ ಪ್ರಕರಣ: ಸಿಬಿಐ ತನಿಖೆಗೆ ಬಿಜೆಪಿ ಶಾಸಕ ಯತ್ನಾಳ್ ಒತ್ತಾಯ

Update: 2021-03-12 22:01 IST

ವಿಜಯಪುರ, ಮಾ. 12: ‘ಸಿಡಿ ಪ್ರಕರಣವನ್ನು ವಿಶೇಷ ತನಿಖಾ ತಂಡ(ಸೀಟ್)ಕ್ಕೆ ನೀಡಿದ್ದು, ಸಮಂಜಸವಲ್ಲ. ಆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕಿತ್ತು. ಎಸ್‍ಐಟಿ ಮೇಲೆ ಪ್ರಭಾವ ಬೀರಬಹುದು. ಆದರೆ, ಸಿಬಿಐ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು' ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಿಡಿ ತಯಾರಿಸುವ ಗ್ಯಾಂಗ್‍ಗಳಿವೆ. ಈ ಗ್ಯಾಂಗ್‍ಗಳು ರಾಜಕೀಯ ವಿರೋಧಿಗಳಿಗೆ ಆ ಸಿಡಿಗಳನ್ನು ನೀಡಿ ಹಣ ಪಡೆಯುವುದನ್ನು ಮಾಡುತ್ತವೆ. ಈ ಗ್ಯಾಂಗ್‍ಗಳಿಗೆ ಬ್ಲ್ಯಾಕ್‍ಮೇಲ್ ಮಾಡುವುದೇ ಕೆಲಸ ಎಂದರು.

ಯುವರಾಜ ಎಂಬವನ ಬಂಧನವೂ ಆಗಿದ್ದು, ಆತ ಎಂಪಿ, ರಾಜ್ಯಸಭೆ ಸದಸ್ಯರಾಗಲು, ಸಚಿವರಾಗಲು ಕೋಟ್ಯಂತರ ರೂ.ಹಣ ಪಡೆಯುತ್ತಿದ್ದ. ಆತ ಸಿಎಂ ಮನೆಯಲ್ಲಿಯೇ ಇರುತ್ತಿದ್ದ. 50 ಕೋಟಿ ರೂ.ಮನೆ ನಿರ್ಮಿಸಿದ್ದು, ಆತನ ಮನೆಗೆ ಹೋದ ಅತಿಥಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿಸುತ್ತಿದ್ದ. ಈತನ ಜೊತೆಗೆ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಜೊತೆಗಿನ ಒಂದೂ ಫೋಟೋ ಏಕೆ ಹೊರಬರಲಿಲ್ಲ ಎಂದು ಯತ್ನಾಳ್ ಪ್ರಶ್ನಿಸಿದರು.

ಸಚಿವ ಎಸ್.ಟಿ.ಸೋಮಶೇಖರ್ ಸಿಡಿ ಪ್ರಕರಣ ಸಂಬಂಧ ಕಾಂಗ್ರೆಸ್ ಮೇಲೆ ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ. ಅವರು 20-25 ವರ್ಷಗಳ ಅನುಭವದಲ್ಲಿ ಇದನ್ನು ಹೇಳಿದ್ದಾರೆ. ಅವರ ಮಾತು ಅನುಭವದಲ್ಲಿ ಅಮೃತವಿದೆ ಎಂಬಂತಿದೆ. ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಅವರಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಕೆಟ್ಟ ಕೆಲಸ ಮಾಡುವ ಬಗ್ಗೆ ಭಯ ಬಂದಿದೆ. ಕಾಂಗ್ರೆಸ್ ರಾಜ್ಯಕ್ಕೆ ಕೆಟ್ಟ ನಾಯಕತ್ವ ನೀಡಿದ್ದು ದುರ್ದೈವ ಎಂದು ಟೀಕಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆಗೆ ನಮ್ಮ ಸಮ್ಮತಿ ಇಲ್ಲ. ಸೋಮವಾರ(ಮಾ.15) ವಿಧಾನಸಭೆಯಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು. ಇಲ್ಲವಾದರೆ ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಯತ್ನಾಳ್ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News