ಸಾರ್ವಜನಿಕ ರಸ್ತೆ ಒತ್ತುವರಿ: ಕೆಸರು ಗದ್ದೆಯಲ್ಲೇ ಶವ ಸಾಗಿಸಿದ ಗ್ರಾಮಸ್ಥರು
ಮೈಸೂರು,ಮಾ.12: ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡು ಪರಿಶಿಷ್ಟ ಜಾತಿಗೆ ಸೇರಿದ ಜನರಿಗೆ ಜಾಗ ಬಿಡದಿದ್ದ ಪರಿಣಾಮ ಗ್ರಾಮಸ್ಥರು ಜಮೀನಿನ ಕೆಸರು ಗದ್ದೆಯಲ್ಲಿ ಶವ ಸಾಗಿಸಿದ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೆಮ್ಮಿಗೆಯಲ್ಲಿ ನಡೆದಿದೆ.
ಹಲವು ಬಾರಿ ಮನವಿ ಕೊಟ್ಟರೂ ಸ್ಮಶಾನದ ರಸ್ತೆ ಒತ್ತುವರಿ ತೆರವುಗೊಳಿಸಲಿಲ್ಲವೆಂದು ಟಿ.ನರಸೀಪುರ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಧಿಕ್ಕಾರ ಹಾಕಿದ್ದಾರೆ.
ಹೆಮ್ಮಿಗೆ ಗ್ರಾಮದ ರಸ್ತೆಯನ್ನು ಬೇರೆ ಕೋಮಿನ ಕಂದಾಯ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ರಸ್ತೆಯನ್ನೇ ಅಗೆದು ಮನೆ ಕಟ್ಟಿಕೊಂಡಿದ್ದಾರೆ. ಗ್ರಾ.ಪಂ. ಪಿಡಿಓ ಅವರು ಜಿಪಿಎಸ್ ಮಾಡಿ ಒಂದು ಬಿಲ್ ಕೂಡ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರಿಗೆ ರಸ್ತೆ ಜಾಗವಿಲ್ಲದೇ ಜಮೀನಿಗೆ ಇಳಿದು ಕೆಸರು ಗದ್ದೆಯಲ್ಲೇ ನಡೆದು ಶವ ಸಾಗಿಸಬೇಕಾಯಿತು. ಜಿಲ್ಲಾಡಳಿತ ಕೂಡಲೇ ನಕಾಶೆಯಲ್ಲಿರುವ ರಸ್ತೆ ಒತ್ತುವರಿ ತೆರವುಗೊಳಿಸಬೆಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.