×
Ad

ಪೊನ್ನಂಪೇಟೆ: ಹುಲಿ ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ವಿಫಲ: ಮುಂದುವರಿದ ಅಹೋರಾತ್ರಿ ಪ್ರತಿಭಟನೆ

Update: 2021-03-12 23:58 IST

ಮಡಿಕೇರಿ, ಮಾ.12: ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಗೆ ಬಾಲಕ ಬಲಿಯಾದಲ್ಲಿಂದ ಇಲ್ಲಿಯವರೆಗೆ ರೈತ ಸಂಘಟನೆಯ ಸಹಕಾರದೊಂದಿಗೆ ಗ್ರಾಮಸ್ಥರ ಪ್ರತಿಭಟನೆ ನಿರಂತರವಾಗಿ ಮುಂದುವರಿದಿದ್ದರೂ, ರೈತಾಪಿ ವರ್ಗವನ್ನು ಕಂಗಾಲಾಗಿಸಿರುವ ಹುಲಿಯ ಸುಳಿವು ಪತ್ತೆ ಮಾಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ಬೆಳ್ಳೂರು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿರುವ ಹುಲಿಯ ದಾಳಿಗೆ ಗುರುವಾರ ರಾತ್ರಿ ಟಿ.ಶೆಟ್ಟಿಗೇರಿ ಸಮೀಪದ ನಾಲ್ಕೇರಿ ಗ್ರಾಮದ ರಾಮಚಂದ್ರ ಎಂಬವರಿಗೆ ಸೇರಿದ ಹಸು ಬಲಿಯಾಗಿದೆ. ಇಂದು ಬೆಳಗ್ಗೆ ಹಸುವಿನ ಪತ್ತೆಗಾಗಿ ಪರಿಶೀಲನೆ ನಡೆಸಿದಾಗ, ಹಸುವನ್ನು ಹುಲಿ 30 ರಿಂದ 35 ಅಡಿಗಳಷ್ಟು ದೂರಕ್ಕೆ ಎಳೆದೊಯ್ದಿರುವುದು ಗೋಚರಿಸಿದೆ.

ಕಳೆದ ಫೆಬ್ರವರಿ 20 ಮತ್ತು 21 ರಂದು ಟಿ.ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಬಾಲಕ ಮತ್ತು ವೃದ್ಧೆ ಬಲಿಯಾಗಿದ್ದರು. ಈ ಹಂತದಲ್ಲಿ ಅರಣ್ಯ ಇಲಾಖೆ ಜೀವಹಾನಿಗೆ ಕಾರಣವಾದ ಹುಲಿಯ ಸೆರೆಗೆ ನಡೆಸಿದ ಪ್ರಯತ್ನಗಳು ವಿಫಲವಾದದ್ದರ ಪರಿಣಾಮ ಇದೀಗ ಬೆಳ್ಳೂರು ಗ್ರಾಮದಲ್ಲಿ ಬಾಲಕ ಹುಲಿಗೆ ಆಹುತಿಯಾಗಿದ್ದಾನೆ. ಈ ಎಲ್ಲಾ ಘಟನೆಗಳಿಗೆ ಸೂಕ್ತ ಸ್ಪಂದನ ನೀಡದ ಸರ್ಕಾರ, ಅಗತ್ಯ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಗಳೇ ಕಾರಣವೆನ್ನುವುದು ಈ ಭಾಗದ ಗ್ರಾಮೀಣರು ಮತ್ತು ರೈತ ಸಂಘದ ನೇರ ಆರೋಪ.

ಮುಂದುವರಿದ ಪ್ರತಿಭಟನೆ: ದುರ್ಘಟನೆ ಸಂಭವಿಸಿದ ಬೆಳ್ಳೂರು ಗ್ರಾಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿದಿದೆ. ಶುಕ್ರವಾರ ಪ್ರತಿಭಟನಾ ನಿರತರು ಮಾಡಬೇಕಾದ ಮುಂದಿನ ಹೆಜ್ಜೆಗಳ ಬಗ್ಗೆ ಗಂಭೀರ ಚರ್ಚೆಗಳನ್ನು ನಡೆಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News