×
Ad

ಅಶ್ಲೀಲ ಸಿಡಿ ಪ್ರಕರಣ: ಅನಾಮಿಕರ ವಿರುದ್ಧ ರಮೇಶ್ ಜಾರಕಿಹೊಳಿ ದೂರು; ಎಫ್‍ಐಆರ್ ದಾಖಲು

Update: 2021-03-13 17:19 IST

ಬೆಂಗಳೂರು, ಮಾ.13: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣದ ವಿಚಾರಣೆಯನ್ನು ಸಿಟ್(ಎಸ್‍ಐಟಿ) ನಡೆಸುತ್ತಿರುವ ಬೆನ್ನಲ್ಲೇ ಮೊದಲ ಬಾರಿಗೆ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದ್ದು, ಕೃತ್ಯ ನಡೆಸಿರುವ ವ್ಯಕ್ತಿಗಳ ಹೆಸರು, ವಯಸ್ಸು ಸೇರಿದಂತೆ ಯಾವುದೇ ರೀತಿಯ ಮಾಹಿತಿ ಉಲ್ಲೇಖಿಸಿಲ್ಲ.

ಶನಿವಾರ ಸದಾಶಿವನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ ಅವರ ಆಪ್ತ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಾಗರಾಜ್ ಅವರು ಎರಡು ಪುಟಗಳ ದೂರು ಸಲ್ಲಿಸಿದರು.

ಇದರಲ್ಲಿ ನಕಲಿ ಸಿಡಿ ಸೃಷ್ಟಿಸಿ ಬೆದರಿಕೆವೊಡ್ಡಿರುವುದಲ್ಲದೆ, ತೇಜೋವಧೆಗೆ ಯತ್ನಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ದೂರಿನ ಬಗ್ಗೆ ಠಾಣೆಯ ಇನ್‍ಸ್ಪೆಕ್ಟರ್, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಪರಿಶೀಲನೆ ಪ್ರಕ್ರಿಯೆ ಮುಗಿಸಿದ ಠಾಣಾಧಿಕಾರಿ ಸಂಜೆ ವೇಳೆಗೆ ಎಫ್‍ಐಆರ್ ದಾಖಲು ಮಾಡಿದರು.

ಎಫ್‍ಐಆರ್ ನಲ್ಲಿ ಏನಿದೆ?: ‘ನನ್ನ(ರಮೇಶ್ ಜಾರಕಿಹೊಳಿ) ವಿರುದ್ಧವಾಗಿ ರಾಜಕೀಯವಾಗಿ ತೇಜೋವಧೆ ಮಾಡಲು, ರಾಜಕೀಯವಾಗಿ ಮುಗಿಸಲು ಹಾಗೂ ಹಣ ವಸೂಲಿ ಮಾಡಲು ಒಂದು ಷ್ಯಡಂತ್ರ ರೂಪಿಸಿದ್ದಾರೆ. ಸುಮಾರು 3 ತಿಂಗಳಿನಿಂದ ಸದಾಶಿವನಗರದಲ್ಲಿ ನನ್ನ ವಿರುದ್ಧ ಮಸಲತ್ತು ಹಾಗೂ ಮೋಸ ಮಾಡಿ ಒಂದು ನಕಲಿ ಸಿಡಿಯನ್ನು ಸೃಷ್ಟಿಸಿ ಮಾನಸಿಕವಾಗಿ ಹಿಂಸೆಯನ್ನು ನೀಡಿದ್ದಾರೆ.

ಜತೆಗೆ, ರಾಜಕೀಯವಾಗಿ ಮಾನಹಾನಿ ಮಾಡಿ ನನ್ನಿಂದ ಹಣವನ್ನು ಪಡೆಯಲು ಪ್ರತ್ನಿಸುತ್ತಿದ್ದಾರೆ. ಇದರ ಹಿಂದೆ ಹಲವಾರು ಜನರಿದ್ದು, ಕೆಲವರು ಷ್ಯಡಂತ್ರ ರಚಿಸಿ, ಇನ್ನು ಕೆಲವರು ಸಿಡಿ ತಯಾರಿಸಲು ಭಾಗಿಯಾಗಿ ಇತರರನ್ನು ಬಳಸಿಕೊಂಡು ಅಂತರ್ಜಾಲಗಳ ಮೂಲಕ ಬಿಡುಗಡೆ ಮಾಡಿ ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡುತ್ತಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿರುವ ದೂರಿನನ್ವಯ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು, ದೂರಿನನ್ವಯ ಐಪಿಸಿ 1860 ಅನ್ವಯ 120ಬಿ, 385, 465(ಫೋರ್ಜರಿ), 469(ಫೋರ್ಜರಿ ದಾಖಲೆ ಸೃಷ್ಟಿಸಿ ವ್ಯಕ್ತಿಯೊಬ್ಬರ ಗೌರವಕ್ಕೆ ಧಕ್ಕೆ ತರುವುದು) ಸೆಕ್ಷನ್‍ಗಳನ್ನು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲರಿಗೂ ಬೆದರಿಕೆ: ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅಧಿಕೃತವಾಗಿ ನಾನು ದೂರು ನೀಡಿದ್ದೇನೆ. ನನಗೊಬ್ಬನಿಗೆ ಮಾತ್ರವಲ್ಲ, ಎಲ್ಲರಿಗೂ ಬೆದರಿಕೆ ಹಾಕಲಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಅವರ ಸೂಚನೆಯಂತೆ ದೂರು ಕೊಟ್ಟಿದ್ದೇನೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದ್ದು, ಯಶವಂತಪುರದಲ್ಲಿಯೇ ನನ್ನ ವಿರುದ್ಧ ಮಸಲತ್ತು ಹೂಡಲಾಗಿದೆ ಎಂದು ಆರೋಪಿಸಿದರು.

ನಾನೊಬ್ಬನೇ ಬಲಿಪಶು ಅಲ್ಲ, ಎಲ್ಲರಿಗೂ ಬೆದರಿಕೆ ಹಾಕಲಾಗಿದೆ ಎಂದ ಅವರು, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಕೊನೆಯವರೆಗೂ ಕಾನೂನು ಹೋರಾಟ ಮಾಡುತ್ತೇನೆ, ಕಾನೂನು ಪ್ರಕಾರವೇ ಮುಂದುವರಿಯುತ್ತೇವೆ ಎಂದು ರಮೇಶ್ ಜಾರಕಿಹೊಳಿ ನುಡಿದರು.

ಇಂದಿನಿಂದ ಸಿಡಿ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ತನಿಖೆಯ ಮಾಹಿತಿ ಸಿಗಲಿದೆ. ಸುಲಿಗೆ ಬಗ್ಗೆ ನಾನು ಏನೂ ಹೇಳಲ್ಲ. ಮುಂದಿನ ದಿನಗಳಲ್ಲಿ ಎಲ್ಲರ ಹೆಸರು ಬಹಿರಂಗಪಡಿಸುತ್ತೇನೆ. ಅಲ್ಲದೆ, ಆ ಮಹಾನಾಯಕನ ಹೆಸರನ್ನು ಶೀಘ್ರವೇ ಬಹಿರಂಗಪಡಿಸುತ್ತೇನೆ. ಇದರ ಹಿಂದೆ ನೂರಾರು ಕೋಟಿ ಷಡ್ಯಂತ್ರ ಇರುವುದು ಸತ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News