ಬಸ್‍ಗಳಿಗೆ ಕಪ್ಪು ಮಸಿ ಬಳಿದ ಶಿವಸೇನೆ ಕಾರ್ಯಕರ್ತರು: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತ
ಬೆಳಗಾವಿ, ಮಾ.13: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಸಾರಿಗೆ ಬಸ್‍ಗಳಿಗೆ ಕಪ್ಪು ಮಸಿ ಬಳಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್‍ಗಳ ಸಂಚಾರ ಸ್ಥಗಿತಗೊಂಡಿವೆ.
ರಾಜ್ಯದ ಸುಮಾರು 300ಕ್ಕೂ ಹೆಚ್ಚು ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಮಹಾರಾಷ್ಟ್ರದಿಂದ ಬೆಳಗಾವಿಗೆ ಸಂಚರಿಸುತ್ತಿದ್ದ 58 ಬಸ್‍ಗಳನ್ನು ಅಲ್ಲಿನ ಸರಕಾರ ಸ್ಥಗಿತಗೊಳಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರಿಗೆ ಶಿವಸೇನೆ ಕಾರ್ಯಕರ್ತರು ಸಮಸ್ಯೆ ಮಾಡಿದರೆ ಕೇಂದ್ರ ಸರಕಾರಕ್ಕೆ ಗಮನಕ್ಕೆ ತಂದು, ಕಠಿಣ ಕ್ರಮಕ್ಕೆ ಆಗ್ರಹಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗಡಿವಿಚಾರವನ್ನು ಮುಂದಿಟ್ಟುಕೊಂಡು ಶಿವಸೇನೆ ಕಾರ್ಯಕರ್ತರು ಕನ್ನಡಿಗರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಕೊಲ್ಲಾಪುರದಲ್ಲಿ ಕರ್ನಾಟಕ ಬಸ್‍ಗಳಿಗೆ ಕಪ್ಪು ಬಣ್ಣ ಬಳಿದಿರುವುದು ಸರಿಯಲ್ಲವೆಂದು ಖಂಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ಹೀಗಾಗಿ ಅಲ್ಲಿನ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಬೆಳಗಾವಿ ಗಡಿ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.