×
Ad

ಪಕ್ಷ ಜೀವಂತವಾಗಿದೆ ಎಂದು ತೋರಿಸಿಕೊಳ್ಳಲು ಶಿವಮೊಗ್ಗದಲ್ಲಿ ಪ್ರತಿಭಟನೆ: ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಟೀಕೆ

Update: 2021-03-13 18:20 IST

ಶಿವಮೊಗ್ಗ,ಮಾ.13: ಕಾಂಗ್ರೆಸ್ ಪಕ್ಷ ಜೀವಂತವಾಗಿದೆ ಎಂದು ತೋರಿಸಿಕೊಳ್ಳಲು ಶಿವಮೊಗ್ಗದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗಕ್ಕೆ ಬರುತ್ತಿರುವ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಭದ್ರಾವತಿಗೆ ಹೋಗಿ ಬರಲಿ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಭದ್ರಾವತಿಗೆ ಹೋಗಿ ಅಲ್ಲಿನ ಕ್ರೀಡಾಪಟುಗಳನ್ನು ಕೇಳಲಿ. ಭಾರತ ಮಾತಾಕೀ ಜೈ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ತಪ್ಪಾ? ಪಾಕಿಸ್ತಾನ ಝಿಂದಾಬಾದ್, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಬೇಕಿತ್ತಾ ಎಂದು ಪ್ರಶ್ನಿಸಿದರು.

ಕಬ್ಬಡ್ಡಿ ಪಂದ್ಯಾವಳಿ ಸಂದರ್ಭದಲ್ಲಿ ಜಯ ಗಳಿಸಿದವರು ಸಂಭ್ರಮಿಸಿದ್ದಾರೆ. ಸೋತವರು ಸೋಲನ್ನು ಒಪ್ಪಿಕೊಳ್ಳದೆ ಗೂಂಡಾಗಿರಿ ಮಾಡಿ ಹಲ್ಲೆ ನಡೆಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಪ್ರತಿಭಟನೆ ನಡೆಸುವುದು ಸರಿಯೇ. ಮೊದಲು ಕಾಂಗ್ರೆಸ್ ನಾಯಕರು ಭದ್ರಾವತಿಗೆ ಹೋಗಿ ವಿಷಯ ತಿಳಿದುಕೊಳ್ಳಬೇಕು. ಕ್ರೀಡಾಪಟುಗಳೊಂದಿಗೆ ಮಾತನಾಡಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸದೆ, ಕ್ರೀಡಾ ಮನೋಭಾವ ತೋರದೆ ಈ ರೀತಿ ಸಮಾವೇಶ ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳು, ನಾನು ಅಥವಾ ಸಂಸದರು ತಪ್ಪು ಮಾಡಿದ್ದರೆ ಕೆಲಸ ಕಾರ್ಯ ಮಾಡದಿದ್ದರೆ ಪ್ರತಿಭಟನೆ ಮಾಡಿ ಟೀಕಿಸಲಿ. ಅದನ್ನು ಬಿಟ್ಟು ವಿನಾಕಾರಣ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಭದ್ರಾವತಿ ಘಟನೆ ವಿಚಾರದಲ್ಲಿ ಕಾಂಗ್ರೆಸ್ ಅಧೋಗತಿಗೆ ಹೋಗಲಿದೆ ಎಂದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸಿದೆ. ಆದಷ್ಟು ಬೇಗ ತನಿಖೆ ಮುಗಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿ. ಮಕ್ಕಳು ಟಿವಿ ನೋಡದಂತಹ ಪರಿಸ್ಥಿತಿಯಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News