×
Ad

ಬೆಳಗಾವಿ ರೈತ ಮಹಾಪಂಚಾಯತ್‍ಗೆ ಅನುಮತಿ ನೀಡದ ಜಿಲ್ಲಾಡಳಿತ: ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ

Update: 2021-03-13 19:12 IST

ಬೆಳಗಾವಿ, ಮಾ.13: ಕೇಂದ್ರ ಸರಕಾರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಾ.31ರಂದು ನಡೆಸಲು ಉದ್ದೇಶಿಸಿರುವ ರೈತರ ಮಹಾಪಂಚಾಯತ್‍ಗೆ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಯಾವುದೇ ಮೈದಾನವನ್ನೂ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮಾ.20ರಂದು ಹಾಗೂ ಹಾವೇರಿಯಲ್ಲಿ ಮಾ.21ರಂದು ಮಹಾಪಂಚಾಯತ್ ಹಮ್ಮಿಕೊಂಡಿದ್ದು, ಅಲ್ಲಿ ಮೈದಾನಗಳು ದೊರೆತಿವೆ. ಆದರೆ, ಇಲ್ಲಿ ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಜುಗರ ಆಗಬಾರದೆಂದು ಸರಕಾರವು ಅಧಿಕಾರಿಗಳ ಮೇಲೆ ಒತ್ತಡ ತಂದು ಮೈದಾನ ಸಿಗದಂತೆ ನೋಡಿಕೊಂಡಿದೆ ಎಂದು ಆರೋಪಿಸಿದರು.

ಕೃಷಿಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತದ ಅಸಹಕಾರದ ನಡುವೆಯೂ ನಾವು ಚಳವಳಿ ನಡೆಸಿಯೇ ತೀರುತ್ತೇವೆ ಎಂದು ತಿಳಿಸಿದರು.

ಕೇಂದ್ರದ ರೈತ ವಿರೋಧಿ ಧೋರಣೆಯನ್ನು ಜನರ ಮುಂದೆ ತೆರೆದಿಡಬೇಕಾಗಿದೆ. ಹೀಗಾಗಿ, ರಾಣಿ ಚನ್ನಮ್ಮ ವೃತ್ತದಲ್ಲೇ ವಿಭಾಗ ಮಟ್ಟದ ಮಹಾಪಂಚಾಯತ್ ನಡೆಸುವುದು ಅನಿವಾರ್ಯವಾಗಿದೆ. ಸಹಸ್ರಾರು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಮುಖ್ಯವಾಗಿ  ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ರಾಕೇಶ್ ಟಿಕಾಯತ್, ಯುದ್ಧವೀರ್ ಸಿಂಗ್, ಡಾ.ದರ್ಶನ್ ಪಾಲ್ಗೊಳ್ಳಲಿದ್ದು, ರೈತ ಮುಖಂಡ ಯೋಗೇಂದ್ರ ಯಾದವ್‍ಗೆ ಆಹ್ವಾನ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.

ಇದು ಕೇವಲ ರೈತ ಸಂಘದ ಹೋರಾಟವಲ್ಲ. ಇಡೀ ಸಮಾಜದ ಚಳವಳಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಎಲ್ಲರಿಗೂ ತೊಂದರೆಯಾಗಿಲ್ಲವೇ ಎಂದು ಪ್ರಶ್ನಿಸಿ ಅವರು, ಉತ್ತರ ಭಾರತದಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಸರಕಾರ ಎಷ್ಟರ ಮಟ್ಟಿಗೆ ಸ್ಪಂದಿಸಿದೆ ಎಂಬುದು ಜನರಿಗೆ ಗೊತ್ತಾಗಿದೆ.

ಕೊರೆಯುವ ಚಳಿಯಲ್ಲೂ ಹೊಸದಿಲ್ಲಿಯ ಗಡಿಗಳಲ್ಲಿ ಅವರು ಚಳವಳಿ ಮಾಡುತ್ತಿದ್ದಾರೆ. 230 ಮಂದಿ ಅಲ್ಲಿನ ವಾತಾವರಣ ತಾಳಲಾರದೆ ಪ್ರಾಣ ತ್ಯಾಗ ಮಾಡಿದ್ದಾರೆ. ಬೇರೆ ಬೇರೆ ಸ್ವರೂಪದಲ್ಲಿ ಹೋರಾಟ ಮುಂದುವರಿದರೂ ಸರಕಾರ ತಲೆಕೆಡಿಸಿಕೊಂಡಿಲ್ಲ ಎಂದರು.

ಸಂಘದ ಉತ್ತರ ಕರ್ನಾಟಕದ ಗೌರವ ಅಧ್ಯಕ್ಷ ಶಶಿಕಾಂತ ಪಡಿಸಲಗಿ ಮಾತನಾಡಿ, ಬೆಳಗಾವಿ ಜಿಲ್ಲಾಡಳಿತ ಯಾವುದೇ ಸ್ಥಳ ನೀಡುತ್ತಿಲ್ಲ. ಚನ್ನಮ್ಮ ವೃತ್ತದಲ್ಲೂ ಅವಕಾಶ ಕೊಡದಿದ್ದರೆ ಜೈಲ್ ಭರೋ ಚಳವಳಿ ಆಗಬಹುದು. ರೈತ ಸಂಘದ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News