ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ರಾಜ್ಯ ಸರಕಾರದ ದಾಳಿ: ವ್ಯಾಪಕ ಆಕ್ರೋಶ

Update: 2021-03-13 14:35 GMT

ಬೆಂಗಳೂರು, ಮಾ.13: ರಾಜ್ಯ ಸರಕಾರವು ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ ಎಂಬ ಆರೋಪಗಳ ಮಧ್ಯೆಯೇ, ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಸ್ತಾವ ಹೊಂದಿರುವ ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ವಿಧೇಯಕ 2021ಅನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಮುಂದಾಗಿದ್ದು, ಸರಕಾರದ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ರಾಜ್ಯ ಸರಕಾರ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು 1987ರಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ಸರಿಪಡಿಸುವ ಹೆಸರಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ಸೆಕ್ಷನ್ 27(ಎ)ಗೆ ತಿದ್ದುಪಡಿ ತರಲು ಸರಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.

ಸೋಮವಾರ(ಮಾ.15) ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ವಿಧೇಯಕ 2021 ಅನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯ ತೆಗೆದು ಹಾಕಲು ಮತ್ತು ಹೆಚ್ಚಿನ ವ್ಯಾಜ್ಯಗಳನ್ನು ತಪ್ಪಿಸುವುದು ಈ ತಿದ್ದುಪಡಿ ವಿಧೇಯಕದ ಉದ್ದೇಶ ಎಂದು ರಾಜ್ಯ ಸರಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ವಿಧೇಯಕದಲ್ಲಿ ಏನಿದೆ?: ಅಲ್ಪಸಂಖ್ಯಾತರಿಗೆ ಸೇರಿದ ಅಥವಾ ಅನ್ಯಥಾ ಯಾವುದೇ ಸೊಸೈಟಿಯು, ವ್ಯಾಜ್ಯವು ಬಾಕಿಯಿರುವ ಕಾರಣದಿಂದಾಗಿ ಅಥವಾ ಅನ್ಯಥಾ ವಾರ್ಷಿಕ ಮಹಾಸಭೆಯನ್ನು ನಡೆಸಿಲ್ಲದಿದ್ದರೆ ಅಥವಾ ನಡೆಸಲು ಅಸಮರ್ಥವಾದರೆ, ಅಲ್ಪಸಂಖ್ಯಾತರಿಗೆ ಸೇರಿದ ಅಥವಾ ಅನ್ಯಥಾ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರ ಪದಾವಧಿಯು ಮುಕ್ತಾಯಗೊಂಡಿದ್ದರೆ ಮತ್ತು ಹೊಸ ಆಡಳಿತ ಮಂಡಳಿಯನ್ನು ಯಾವುದೇ ಕಾರಣಕ್ಕಾಗಿ ರಚಿಸಿಲ್ಲದಿದ್ದರೆ, ರಿಜಿಸ್ಟ್ರಾರ್ ಅಥವಾ ಅನ್ಯಥಾ ಮಾಡಿದ ವರದಿಯ ಮೇಲೆ ವಿಚಾರಣೆಯ ಮೇರೆಗೆ, ರಾಜ್ಯ ಸರಕಾರವು ಸಾರ್ವಜನಿಕ ಹಿತಾಸಕ್ತಿಯಲ್ಲಿ ಹಾಗೆ ಮಾಡುವುದು ಅಗತ್ಯವೆಂದು ಪರಿಗಣಿಸಿದರೆ ಆಡಳಿತಾಧಿಕಾರಿಯನ್ನು ನೇಮಿಸಬಹುದು.

ಹೈಕೋರ್ಟ್ ಆದೇಶವೇನು?: ಖುರೇಷಿ ಎಜುಕೇಷನ್ ಸೊಸೈಟಿ ಮತ್ತು ಇತರರ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅವಕಾಶವು ಸಂವಿಧಾನದ ಅನುಚ್ಛೇದ 31 ಮತ್ತು 31ಎ(1)(ಬಿ) ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಒದಗಿಸಿರುವ ಹಕ್ಕುಗಳಿಗೆ ವಿರುದ್ಧವಾಗಿದೆಯಲ್ಲದೆ, ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ27(ಎ) ಅಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು 1987ರಲ್ಲಿ ಹೈಕೋರ್ಟ್ ಆದೇಶ ನೀಡಿತ್ತು.

ಹೈಕೋಟ್ ರಿಟ್ ಅರ್ಜಿ ಸಂಖ್ಯೆ 15753/1986ಕ್ಕೆ ಸಂಬಂಧಿಸಿದಂತೆ 1987ರ ಫೆ.3ರ ತೀರ್ಪಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮ, 1960ರ 27ಎ ಪ್ರಕರಣವು ಸಂವಿಧಾನದ 30(1)ನೆ ಅನುಚ್ಛೇದದ ಉಲ್ಲಂಘನೆಯಾಗಿರುವುದರಿಂದ ಮತ್ತು 1991ರ ಮಾ.7ರಂದು ರಿಟ್ ಅಪೀಲು ಸಂಖ್ಯೆ:357/1987 ಕೂಡ ವಜಾಗೊಂಡಿದೆ. ಮತ್ತಷ್ಟು ವ್ಯಾಜ್ಯಗಳನ್ನು ತಪ್ಪಿಸಲು ಹಾಗೂ ಸರಕಾರದ ಸೊಸೈಟಿಯ ಸದಸ್ಯರ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯ ತೊಡೆದು ಹಾಕಲು, ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮ 1960ನ್ನು (1960ರ ಕರ್ನಾಟಕ ಅಧಿನಿಯಮ ನಂ.17) ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಿ ಈ ತಿದ್ದುಪಡಿ ವಿಧೇಯಕವನ್ನು ಮಂಡಿಸುತ್ತಿರುವುದಾಗಿ ಸರಕಾರ ತಿಳಿಸಿದೆ.

ಸಂವಿಧಾನ ಬಾಹಿರ

ರಾಜ್ಯ ಸರಕಾರವು ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ವಿಧೇಯಕ-2021ರಲ್ಲಿ ಪ್ರಸ್ತಾವಿಸಿರುವ ಅಂಶಗಳು ಸಂವಿಧಾನ ಬಾಹಿರವಾಗಿದ್ದು, ಇದು ಸಂವಿಧಾನದ ಅನುಚ್ಛೇದ 30ರ ಸ್ಪಷ್ಟ ಉಲ್ಲಂಘನೆಯಾಗಿದೆ.

-ರಹ್ಮತುಲ್ಲಾ ಕೊತ್ವಾಲ್, ಹೈಕೋರ್ಟ್ ಹಿರಿಯ ನ್ಯಾಯವಾದಿ

(ರಹ್ಮತುಲ್ಲಾ ಕೊತ್ವಾಲ್)

ಭಾಷಾ ಅಥವಾ ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಲು ಸಂವಿಧಾನದಲ್ಲಿ ವಿಶೇಷ ಹಕ್ಕುಗಳನ್ನು ಕಲ್ಪಿಸಲಾಗಿದೆ. ಸಹಕಾರ ಸಂಘಗಳ ನೋಂದಣಿಗೆ ಸಂಬಂಧಿಸಿದ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಆದರೆ, ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿದೆ. ಸರಕಾರ ಉದ್ದೇಶಪೂರ್ವಕವಾಗಿ ಈ ವಿಧೇಯಕವನ್ನು ತರುತ್ತಿದೆ ಎಂದೆನಿಸುತ್ತಿದೆ.

-ಡಾ.ಕೆ.ರಹ್ಮಾನ್ ಖಾನ್, ಕೇಂದ್ರದ ಮಾಜಿ ಸಚಿವ

Writer - -ಅಮ್ಜದ್ ಖಾನ್ ಎಂ.

contributor

Editor - -ಅಮ್ಜದ್ ಖಾನ್ ಎಂ.

contributor

Similar News