×
Ad

ದೌರ್ಜನ್ಯ ಮುಂದುವರಿದರೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಮುತ್ತಿಗೆ: ಸಿದ್ದರಾಮಯ್ಯ ಎಚ್ಚರಿಕೆ

Update: 2021-03-13 21:30 IST

ಶಿವಮೊಗ್ಗ, ಮಾ.13: ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಅವರ ಕುಟುಂಬ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ಶನಿವಾರ ಶಿವಮೊಗ್ಗ ಚಲೋ ನಡೆಸಿದರು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಖಾಸಗಿ ಬಸ್ ನಿಲ್ದಾಣದಿಂದ ಹೊರಟ ಮೆರವಣಿಗೆ ಬಿ.ಹೆಚ್ ರಸ್ತೆ ಮುಖಾಂತರ ಅಮಿರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ಪ್ರತಿಮೆ ಮಾರ್ಗವಾಗಿ ಬಿ.ಹೆಚ್ ರಸ್ತೆಯಲ್ಲಿ ಸಾಗಿ ಮಿನಾಕ್ಷಿ ಭವನದ ಸೈನ್ಸ್ ಮೈದಾನದವರೆಗೆ ನಡೆಯಿತು.

ಉರಿ ಬಿಸಿಲನ್ನೂ ಲೆಕ್ಕಿಸಿದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೆರವಣಿಗೆಯ ಉದ್ದಕ್ಕೂ ಪ್ರಜಾಪ್ರಭುತ್ವ ನೀತಿ ಬಿಜೆಪಿಯ ದುಷ್ಟ ಆಡಳಿತಕ್ಕೆ ಬಲಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸೈನ್ಸ್ ಮೈದಾನದಲ್ಲಿ ನಡೆದ ಜನದ್ವನಿ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಭೆ ರಾಜ್ಯ ರಾಜಕಾರಣದ ಬದಲಾವಣೆಯ ಸಭೆ. ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗಾಗಿ ಈ ಸಭೆ ನಡೆಯುತ್ತಿದೆ ಎಂದರು.

ಅಧಿಕಾರ ಯಾರದ್ದೂ ಶಾಶ್ವತವಲ್ಲ. ಸರ್ಕಾರಗಳು ರಾತ್ರೋ ರಾತ್ರಿ ಬದಲಾಗುತ್ತವೆ. ಆದರೆ ಪೊಲೀಸ್ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಆದರೆ ಇಂದು ಪೊಲೀಸರು ಕಾನೂನಿನ ಚೌಕಟ್ಟಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ರೈತರಿಗೆ ಭೂಮಿ ನೀಡುವ ಕೆಲಸ ಮಾಡಿದರೆ ಬಿಜೆಪಿಯವರು ರೈತರ ಭೂಮಿ ಕಿತ್ತುಕೊಂಡು ಮಾರುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸ. ಕಾಂಗ್ರೆಸ್ಸಿನದು ರಾಷ್ಟ್ರೀಕರಣ ನೀತಿ. ಬಿಜೆಪಿಯದ್ದು ಖಾಸಗೀಕರಣ ನೀತಿ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿಯ ಅಂತ್ಯ ಶಿವಮೊಗ್ಗದಿಂದಲೇ ಆರಂಭಗೊಳ್ಳಬೇಕು. ಇದಕ್ಕಾಗಿಯೇ ಶಿವಮೊಗ್ಗದಿಂದ ಹೋರಾಟ ಆರಂಭಿಸಿದ್ದೇವೆ. ಅಡಕೆ ಹಾನಿಕಾರಕವಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸುವ ಕೆಲಸವನ್ನೂ ಯಡಿಯೂರಪ್ಪ ಮಾಡಿಲ್ಲ. ಇದು ಯಡಿಯೂರಪ್ಪ ಅವರು ಅಡಕೆ ಬೆಳೆಗಾರರಿಗೆ ಮಾಡಿರುವ ಅನ್ಯಾಯ. ಡಿಕೆಶಿಯನ್ನು ಸಿಲುಕಿಸಬೇಕು ಎಂದು ಬಿಜೆಪಿಯವರು ಬಹಳ ಸಂಚು ಮಾಡುತ್ತಿದ್ದಾರೆ. ಡಿ.ಕೆ.ಶಿವಕಮಾರ್ ಹೆದರುವ ಮಗ ಅಲ್ಲ. ಸಂದರ್ಭ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ. 20 ವರ್ಷ ನಮ್ಮ ಜೊತೆ ಇದ್ದ ಸೋಮಶೇಖರ್ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಮಾಡಬಾರದನ್ನು ಮಾಡಿಕೊಂಡು ಇದೀಗ ಅನುಭವಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪೊಲೀಸ್ ದೌರ್ಜನ್ಯ ಮುಂದುವರಿದರೆ ಸುಮ್ಮನಿರಲು ಸಾಧ್ಯವಿಲ್ಲ. ರಾಜ್ಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳಿಗೂ ಮುತ್ತಿಗೆ ಹಾಕುತ್ತೇವೆ. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಹಳ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರ ಅನೈತಿಕ ಸರ್ಕಾರ. ಸರ್ಕಾರ ಬಹಳ ದಿನ ಇರಲು ಸಾಧ್ಯವಿಲ್ಲ. ಅಕ್ರಮದ ಹಣದಿಂದ ಸರ್ಕಾರ ರಚನೆ ಮಾಡಿದ್ದಾರೆ. ಕೋಟಿ ಕೋಟಿ ರೂ. ಲೂಟಿ ಹೊಡೆದು ಶಿವಮೊಗ್ಗದಲ್ಲಿ ಕೆಲವರು ಆಸ್ತಿ ಮಾಡಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ. ಇವರೇನು ಸತ್ಯಹರಿಶ್ಚಂದ್ರರಾ ಎಂದು ಪ್ರಶ್ನಿಸಿದರು. ಪೊಲೀಸರಿಗೆ ಸಂಬಳ ನೀಡುವುದು ಜನರ ತೆರಿಗೆ ಹಣದಿಂದ. ಯಡಿಯೂರಪ್ಪ, ಈಶ್ವರಪ್ಪನ ಮನೆಯ ಹಣವಲ್ಲ. ಪೊಲೀಸರಿಗೆ ಸಂಬಳವೂ ಇದೆ ಗಿಂಬಳವೂ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಎರಡು ವರ್ಷದಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಏನೂ ಮಾಡಿಲ್ಲ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ಆಸ್ತಿ ಮಾಡುವ ವಿಷಯದಲ್ಲಿ ಕಾಂಪಿಟೇಷನ್ ನಡೆಯುತ್ತಿದೆ. ಈಶ್ವರಪ್ಪ ಮನೆಯಲ್ಲಿ ಎರಡು ದುಡ್ಡು ಎಣಿಸುವ ಮೆಷಿನ್ ಸಿಕ್ಕಿತ್ತು. ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿ ರೈತರನ್ನು ಕೊಂದಿದ್ದು ಮಿಸ್ಟರ್ ಯಡಿಯೂರಪ್ಪ ಎಂದು ದೂರಿದರು.

ಸಮಾವೇಶದಲ್ಲಿ ಶಾಸಕರಾದ ಯು.ಟಿ ಖಾದರ್, ಕೃಷ್ಣ ಬೈರೇಗೌಡ, ಲಕ್ಷ್ಮಿ ಹೆಬ್ಬಾಳ್ಕರ್, ರಾಜೇಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್.ದ್ರುವನಾರಾಯಣ್, ಈಶ್ವರ್ ಖಂಡ್ರೆ, ಸಲೀಂ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕರಾದ ಕೆ.ಬಿ ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಮುಖಂಡರಾದ ತೀ.ನಾ ಶ್ರೀನಿವಾಸ್, ವಿಶ್ವನಾಥ್ ಕಾಶಿ ಸೇರಿದಂತೆ ಹಲವರಿದ್ದರು.

ನಾವು ಭದ್ರಾವತಿಯ ಕಬ್ಬಿಣದಂತೆ 
ನನ್ನ ಮೇಲೆ ನನ್ನ ಕುಟುಂಬ ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಲಾಗಿದೆ. ಈ ಮೂಲಕ ನಮ್ಮನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯವರು ಯತ್ನಿಸಿದ್ದಾರೆ. ಬಿಜೆಪಿಯ ಕುತಂತ್ರ ರಾಜಕಾರಣಕ್ಕೆ ಇದೇ ಸಾಕ್ಷಿ. ನಾವು ಭದ್ರಾವತಿಯ ಕಬ್ಬಿಣದಂತೆ. ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಎಂಬ ಕೆಲಸವನ್ನು ಯಡಿಯೂರಪ್ಪ ಹಾಗೂ ಈಶ್ವರಪ್ಪ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದೆ ಜನ ಅವರ ಅಧಿಕಾರದ ದುರ್ಬಳಕೆಗೆ ತಕ್ಕ ಪಾಠ ಕಲಿಸಬೇಕು.
-ಬಿ.ಕೆ.ಸಂಗಮೇಶ್ವರ್, ಶಾಸಕ

ಬಿಜೆಪಿಯನ್ನು ರಾಜ್ಯದಿಂದ ಕಿತ್ತು ಹಾಕೋಣ
ಜಿಲ್ಲೆಯಲ್ಲಿ ಕಾಂಗ್ರೆಸ್ ನ ಓರ್ವ ಶಾಸಕ ಸಂಗಮೇಶ್ವರ್ ಮಾತ್ರ ಇದ್ದಾರೆ. ಸಂಗಮೇಶ್ವರ್ ಅವರನ್ನು ತುಳಿಯಲು ಬಿಜೆಪಿ ಹೊರಟಿದೆ. ಶಿವಮೊಗ್ಗ ಜಿಲ್ಲೆ ಹೋರಾಟದ ಜಿಲ್ಲೆ. ಇಲ್ಲಿ ಹೋರಾಟಕ್ಕೆ ಮತ್ತೆ ಇದೀಗ ಸಂದರ್ಭ ಕೂಡಿಬಂದಿದೆ. ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತು ಹಾಕಲೇಬೇಕಿದೆ. ಇದಕ್ಕಾಗಿ ಹೊರಾಟ ಮಾಡಲೇಬೇಕು. ಬಿಜೆಪಿಯನ್ನು ಶಿವಮೊಗ್ಗದಿಂದ ಹಾಗೂ ರಾಜ್ಯದಿಂದಲೇ ಕಿತ್ತು ಹಾಕೋಣ.
-ಕಾಗೋಡು ತಿಮ್ಮಪ್ಪ, ಮಾಜಿ ಸಚಿವ

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್‌ಗೆ ಅನ್ಯಾಯವಾಗಿದೆ. ಹೀಗಾಗಿ ನಾವು ಹೋರಾಟ ನಡೆಸಿ ಅವರ ಹಿಂದೆ ನಿಲ್ಲಬೇಕು. ಶ್ರೀರಾಮ ಬಿಜೆಪಿಯವರಿಗಾಗಿ ಮಾತ್ರ ಹುಟ್ಟಿಲ್ಲ. ಶ್ರೀರಾಮ ಶಾಂತಿ, ನ್ಯಾಯ, ಧರ್ಮದ ಸಂಕೇತ. ಬಿಜೆಪಿಯವರು ಶ್ರೀರಾಮನ ಹೆಸರು ಹೇಳಿಕೊಂಡು ಅನ್ಯಾಯ, ಅಧರ್ಮ ಮಾಡುತ್ತಿದ್ದಾರೆ. ಕೆಲ ವರ್ಷದ ಹಿಂದೆ ಬಿಜೆಪಿಯವರು ರಾಮನ ಹೆಸರು ಹೇಳಿ ಇಟ್ಟಿಗೆ ಹೊತ್ತು ಓಡಾಡಿದ್ದರು. ಈಗ ಆ ಇಟ್ಟಿಗೆಗಳು ಎಲ್ಲಿವೆ ಎಂದರೆ ಬಿಜೆಪಿಯವರ ಬಳಿ ಉತ್ತರವಿಲ್ಲ.
-ಜಿ.ಪರಮೇಶ್ವರ್, ಮಾಜಿ ಸಚಿವ

ಶ್ರೀರಾಮ ಆತ ಮರ್ಯಾದಾ ಪುರುಷ. ಆದರೆ ಬಿಜೆಪಿಯವರ ರಾಮ ಸಿಡಿ ರಾಮ. ಆ ಸಿಡಿ ಅಸಲಿನೋ ನಕಲಿನೋ ಅದು ನಮಗೆ ಸಂಬಂಧವಿಲ್ಲ. ಶ್ರೀರಾಮ ಜನಾಭಿಪ್ರಾಯಕ್ಕೆ ಬೆಲೆಕೊಟ್ಟು ಹೆಂಡತಿಯನ್ನೇ ಕಾಡಿಗೆ ಕಳುಹಿಸಿದ್ದ. ಆದರೆ ಶ್ರೀರಾಮನ ಹೆಸರು ಹೇಳುವ ಬಿಜೆಪಿಯವರು ಬಾಂಬೆಗೆ ಹೋಗುತ್ತಾರೆ. ಬಿಜೆಪಿಯವರಿಗೆ ಬಾಂಬೆ ರಾಮಂದಿರ. ಬಿಜೆಪಿಯವರು ಬಾಂಬೆಗೆ ಹೋಗಿ ಭಗವದ್ಗೀತೆ ಓದುತ್ತಾರೆಯೇ ?
-ರಮೇಶ್ ಕುಮಾರ್, ಮಾಜಿ ಸಭಾಪತಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News