ವರ್ಷ ಕಳೆದರೂ ಇನ್ನೂ ಕೋವಿಡ್-19 ಪಾಸಿಟಿವ್ ವರದಿಗೆ ಕಾಯುತ್ತಿದೆ ದೇಶದ ‘ಮೊದಲ’ ಕೊರೋನ ಬಲಿಯ ಕುಟುಂಬ
ಬೆಂಗಳೂರು,ಮಾ.13: ಶಂಕಿತ ಕೋವಿಡ್-19ರಿಂದಾಗಿ ಕಲಬುರಗಿಯ ನಿವಾಸಿ ಖಾಝಿ ಮುಹಮ್ಮದ್ ಹುಸೈನ್ ಸಿದ್ದೀಕಿ (76) ಅವರು ನಿಧನರಾಗಿ ವರ್ಷವೊಂದು ಕಳೆದಿದೆ. ಕಳೆದ ವರ್ಷದ ಮಾ.10ರಂದು ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಿಂದ ಕಲಬುರಗಿಗೆ ವಾಪಸ್ ಕರೆ ತರುತ್ತಿದ್ದಾಗ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದರು.
ಖಾಝಿಯವರು ಮೃತರಾಗಿ ಒಂದು ವರ್ಷವೇ ಕಳೆದು ಹೋಗಿದ್ದರೂ ರಾಜ್ಯದ ಆರೋಗ್ಯ ಅಧಿಕಾರಿಗಳಿಂದ ಅವರ ಕೋವಿಡ್ ಪಾಸಿಟಿವ್ ವರದಿ ಅಥವಾ ಆ ಕುರಿತು ದೃಢೀಕರಣ ತಮ್ಮ ಕೈಸೇರಿಲ್ಲ ಎಂದು ಅವರ ಕುಟುಂಬವು ತಿಳಿಸಿದ್ದಾಗಿ theprint.in ವರದಿ ಮಾಡಿದೆ.
ತನ್ನ ತಂದೆಯ ಸಾವಿಗೆ ಕೊರೋನ ವೈರಸ್ ಕಾರಣವಾಗಿರಲಿಲ್ಲ ಎಂದು ಹೇಳಿದ ಖಾಝಿಯವರ ಪುತ್ರ ಖಾಝಿ ಹಮೀದ್ ಫೈಸಲ್ ಸಿದ್ದಿಕಿ, ತಾನು,ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ಅವರೊಂದಿಗೇ ವಾಸವಿದ್ದೆವು,ಅದರೆ ತಮಗ್ಯಾರಿಗೂ ಸೋಂಕು ತಗುಲಿರಲಿಲ್ಲ. 48 ಗಂಟೆಗಳಿಗೂ ಹೆಚ್ಚು ಕಾಲ ತಾನು ಅಸ್ವಸ್ಥ ತಂದೆಯೊಂದಿಗಿದ್ದೆ ಮತ್ತು ಅವರ ನಿಧನದ ಬಳಿಕ 12 ಮಾರ್ಚ್ ನಿಂದ ಎಂಟು ದಿನಗಳ ಕಾಲ ತನ್ನನ್ನು ನಿರೀಕ್ಷಣೆಯಲ್ಲಿರಿಸಲಾಗಿತ್ತು ಎಂದು ತಿಳಿಸಿದರು.
ತಂದೆಯ ನಿಧನದ ಒಂದು ದಿನದ ಬಳಿಕ ತನ್ನ ಸೋದರಿಯ ಕೊರೋನವೈರಸ್ ಪರೀಕ್ಷಾ ವರದಿ ಪಾಸಿಟಿವ್ ಆಗಿತ್ತು, ಆದರೆ ಆಕೆಗೆ ಸೋಂಕು ಬೇರೆ ಎಲ್ಲಿಂದಲೋ ಹರಡಿದ್ದಿರಬಹುದು ಎಂದ ಹಮೀದ್,ತನ್ನ ಸೋದರಿ ತಂದೆಗೆ ನೆರವಾಗುತ್ತಿದ್ದುದು ನಿಜ. ಆದರೆ ತಾನು ದಿನದ 24 ಗಂಟೆಯೂ ಅವರ ಜೊತೆಯಲ್ಲಿಯೇ ಇದ್ದೆ. ತನಗೆ ಸೋಂಕು ತಗುಲಿರಲಿಲ್ಲ ಎಂದರು.
‘ಕಲಬುರಗಿಯ ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆಯಲ್ಲಿಯ ಸರಕಾರಿ ಅಧಿಕಾರಿಗಳನ್ನು ನಾವು ಹಲವಾರು ಸಲ ಸಂಪರ್ಕಿಸಿದ್ದೆವು. ತಂದೆಯ ನಿಧನದ ಮೂರು ತಿಂಗಳ ಬಳಿಕ 2020 ಜೂನ್ನಲ್ಲಿ ನಾವು ಆ ಪ್ರಯತ್ನವನ್ನು ಕೈಬಿಟ್ಟಿದ್ದೆವು,ತಂದೆಯ ಸಾವಿನ ಬಗ್ಗೆ ಶೋಕಿಸಲೂ ನಮಗೆ ವ್ಯವಧಾನವಿರಲಿಲ್ಲ ’ಎಂದು ಅವರು ತಿಳಿಸಿದರು.
ರಾಜ್ಯ ಆರೋಗ್ಯ ಇಲಾಖೆಯು ಸರಕಾರಕ್ಕೆ ಸಲ್ಲಿಸಿದ್ದ ತನ್ನ ಆಗಿನ ವರದಿಯಲ್ಲಿ ಖಾಝಿಯವರಿಗೆ ಇತರ ಕಾಯಿಲೆಗಳೂ ಇದ್ದವು. ಅವರು ಅಸ್ತಮಾ ಮತ್ತು ಅಧಿಕ ರಕ್ತದೊತ್ತಡ ರೋಗಿಯಾಗಿದ್ದರು. ಮಾ.9ರಂದು ಅವರಿಂದ ಕೋವಿಡ್ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿತ್ತು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸುದ್ದಿಸಂಸ್ಥೆಯು ಆರೋಗ್ಯ ಸಚಿವ ಡಿ.ಕೆ.ಸುಧಾಕರ್ ಅವರಿಂದ ಪ್ರತಿಕ್ರಿಯೆ ಪಡೆಯಲು ನಡೆಸಿದ ಪ್ರಯತ್ನ ವಿಫಲಗೊಂಡಿದೆ ಎಂದು theprint.in ವರದಿ ಮಾಡಿದೆ. ಖಾಝಿಯವರ ನಿಧನದ ಬಳಿಕ ಕಲಬುರಗಿಯು ಸಂಪೂರ್ಣ ಲಾಕ್ಡೌನ್ ಹೇರಲಾಗಿದ್ದ ದೇಶದ ಮೊದಲ ಜಿಲ್ಲೆಯಾಗಿತ್ತು.
2020,ಫೆ.29ರಂದು ಸೌದಿ ಅರೇಬಿಯಾದ ಜಿದ್ದಾದಿಂದ ಮರಳಿದ ಬಳಿಕ ತಂದೆಯ ಆರೋಗ್ಯ ಹದಗೆಟ್ಟಿತ್ತು. ನಂತರ ಅವರಿಗೆ ಉಸಿರಾಟದ ತೊಂದರೆ ಮತ್ತು ಜ್ವರವು ಕಾಣಿಸಿಕೊಂಡಿತ್ತು. ಮಾ.9ರಂದು ಅವರನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದೆಗ ಅಲ್ಲಿಯ ವೈದ್ಯರು ಕೋವಿಡ್ ಶಂಕೆಯನ್ನು ವ್ಯಕ್ತಪಡಿಸಿದ್ದರು. ಅವರ ಸಲಹೆಯ ಮೇರೆಗೆ ಅದೇ ದಿನ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ತಂದೆಯನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು. ಮಾ.10ರಂದು ಕಲಬುರಗಿಗೆ ವಾಪಸ್ ಕರೆತರುತ್ತಿದ್ದಾಗ ಮಾರ್ಗಮಧ್ಯೆ ಅವರ ಸಾವು ಸಂಭವಿಸಿತ್ತು ಎಂದು ಹಮೀದ್ ತಿಳಿಸಿದರು.
ತನ್ನ ಮಾವ ನಿಧನರಾದ ದಿನ ಕಲಬುರಗಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳಾಗಲೀ ಆರೋಗ್ಯ ಇಲಾಖೆಯಾಗಲೀ ಅವರ ಸಾವಿಗೆ ಕೊರೋನವೈರಸ್ ಕಾರಣವಾಗಿತ್ತು ಎಂದು ತಿಳಿಸಿರಲಿಲ್ಲ ಎಂದು ಹಮೀದ್ ರ ಪತ್ನಿ,ಯುನಾನಿ ವೈದ್ಯೆಯಾಗಿರುವ ಡಾ.ಅಕೀಲಾ ಸಿದ್ದಿಕಿ ತಿಳಿಸಿದರು.
‘ಎರಡು ದಿನಗಳ ಬಳಿಕ,ಖಾಝಿಯವರು ಕೋವಿಡ್ನಿಂದ ಮೃತಪಟ್ಟಿದ್ದರು ಎಂದ ಆರೋಗ್ಯ ಇಲಾಖೆ ನಿರ್ಧರಿಸಿದ್ದು ಹೇಗೆ? ಅವರು ಸ್ಯಾಂಪಲ್ಗಳನ್ನು ಸಂಗ್ರಹಿಸಿದ್ದರೆ ಅವರು ನಮಗೆ ಹೇಳುತ್ತಿರಲಿಲ್ಲವೇ ಮತ್ತು ನಮ್ಮನ್ನೂ ಪ್ರತ್ಯೇಕವಾಗಿ ಇರಿಸುತ್ತಿರಲಿಲ್ಲವೇ? ಖಾಝಿಯವರು ಕೋವಿಡ್ ಪಾಸಿಟಿವ್ ಆಗಿದ್ದರು ಎಂದು ತೋರಿಸುವ ಆರೋಗ್ಯ ಇಲಾಖೆಯ ದಾಖಲೆಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ ’ಎಂದರು.