‘ಸಿರಿಧಾನ್ಯ'ಕ್ಕೆ ಜಾಗತಿಕ ಮನ್ನಣೆ ಸಿಗಲು ಕಾಂಗ್ರೆಸ್ ಪಕ್ಷ ಕಾರಣ: ಎಸ್.ಆರ್.ಪಾಟೀಲ್

Update: 2021-03-13 18:08 GMT

ಬೆಂಗಳೂರು, ಮಾ. 13: ‘ಕಡು ಬಡವನ ಆಹಾರ ‘ಸಿರಿಧಾನ್ಯ'ಕ್ಕೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಒಕ್ಕೂಟ 2023ಅನ್ನು ‘ಅಂತರ್‍ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವಾಗಿ ಆಚರಿಸುವುದಾಗಿ ಘೋಷಿಸಿದೆ. ಸಿರಿಧಾನ್ಯಕ್ಕೆ ಜಾಗತಿಕ ಮನ್ನಣೆ ಸಿಗಲು ಕಾಂಗ್ರೆಸ್ ಪಕ್ಷವೇ ಕಾರಣ' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘2017–18ರಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣಬೈರೇಗೌಡ ಅವರು ಕೇಂದ್ರಸರಕಾರಕ್ಕೆ ಸಿರಿಧಾನ್ಯಕ್ಕೆ ಮನ್ನಣೆ ನೀಡುವಂತೆ ಪ್ರಸ್ತಾವನೆ ಕಳಿಸಿದ್ದರು. ಅಲ್ಲದೆ, ಆಹಾರ ಮತ್ತು ಕೃಷಿ ಒಕ್ಕೂಟದ ಆಹ್ವಾನದ ಮೇರೆಗೆ ರೋಮ್‍ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಸಿರಿಧಾನ್ಯಗಳ ಮಹತ್ವ ವಿವರಿಸಿ, ಸಿರಿಧಾನ್ಯಗಳ ವರ್ಷಾಚರಣೆಗೆ ಘೋಷಣೆಗೆ ಮನವಿ ಮಾಡಿದ್ದರು' ಎಂದು ನೆನಪು ಮಾಡಿಕೊಂಡಿದ್ದಾರೆ.

‘ನಮ್ಮ ಪಕ್ಷದ ಮನವಿ ಪುರಸ್ಕರಿಸಿ ವಿಶ್ವಸಂಸ್ಥೆಯ ಎಫ್‍ಎಒಗೆ ಕೇಂದ್ರ ಸರಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಸಿರಿಧಾನ್ಯಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ. ಇದು ಕರ್ನಾಟಕ ರಾಜ್ಯದ ಸಿರಿಧಾನ್ಯ ಆಂದೋಲನಕ್ಕೆ ಸಂದ ಗೌರವ. ಆದರೆ, ಕರ್ನಾಟಕ ಸರಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕೃಷಿ ಇಲಾಖೆ, ಸಾವಯವ ಕೃಷಿ ಮಿಷನ್ ಕೂಡ ಮೌನವಾಗಿವೆ' ಎಂದು ಎಸ್.ಆರ್.ಪಾಟೀಲ್ ಆಕ್ಷೇಪಿಸಿದ್ದಾರೆ.

‘ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‍ನ ಹಿರಿಯ ನಾಯಕ, ಸಾಹಿತಿ ಎಂ.ವೀರಪ್ಪ ಮೊಯ್ಲಿ ಅವರ ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ' ಮಹಾಕಾವ್ಯಕ್ಕೆ 2020ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಘೋಷಣೆಯಾಗಿದೆ. ಈ ಗೌರವಕ್ಕೆ ಭಾಜನರಾದ ವೀರಪ್ಪ ಮೊಯ್ಲಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು'

-ಎಸ್.ಆರ್.ಪಾಟೀಲ್, ಮೇಲ್ಮನೆ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News