×
Ad

ಎಸ್‍ಐಟಿ ಬಗ್ಗೆ ನಂಬಿಕೆ ಇಲ್ಲ, ಅಲ್ಲಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾರೆ: ಯತ್ನಾಳ್ ಅರೋಪ

Update: 2021-03-14 17:33 IST

ಬೆಂಗಳೂರು, ಮಾ. 14: ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದೆ. ನನಗೆ ಎಸ್‍ಐಟಿ ತನಿಖೆ ಪಾರದರ್ಶಕವಾಗಿ ನಡೆಯುವ ಬಗ್ಗೆ ನಂಬಿಕೆ ಇಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ರವಿವಾರ ವಿಜಯಪುರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಡಿ ಪ್ರಕರಣ ಸಂಬಂಧ ಎಸ್‍ಐಟಿ ತನಿಖೆಯ ಮೇಲೆ ನನಗೆ ಸಂಶಯವಿದೆ. ಏಕೆಂದರೆ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಬಿಎಸ್‍ವೈ ಅವರ ಬಿ.ವೈ.ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿಯೊಬ್ಬರು ಅಲ್ಲಿದ್ದಾರೆ. ಈ ಹಿಂದೆ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ವಿಚಾರಣೆ ನಡೆಸಿದರು. ಆದರೆ, ಅದನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಯಿತು. ಹಲವು ನಟಿಯರನ್ನು ಬಂಧಿಸಿದರು. ಆದರೆ, ಅವರಿಗೆ ಸುಪ್ರೀಂಕೋರ್ಟ್‍ನಲ್ಲಿ ಜಾಮೀನು ಸಿಕ್ಕಿದೆ. ಯುವರಾಜ್ ಎಂಬವನ್ನು ಬಂಧಿಸದರೂ ಅದನ್ನು ಮುಚ್ಚಿ ಹಾಕಲಾಗಿದೆ ಎಂದು ದೂರಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯ ಉನ್ನತ ನಾಯಕನ ಪುತ್ರ ಮತ್ತು ಕಾಂಗ್ರೆಸ್ ಉನ್ನತ ನಾಯಕ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಇನ್ನೂ ಬಹಳ ಸಿಡಿಗಳಿವೆ ಎಂದು ಬ್ಲ್ಯಾಕ್‍ಮೇಲ್ ಮಾಡಲಾಗುತ್ತಿದೆ. ಎರಡೂ ಪಕ್ಷಗಳ ಹಿರಿಯ ಮುಖಂಡರ ಮೇಲೆ ಕಠಿಣ ಕ್ರಮ ಆಗಬೇಕಾದರೆ ಸಿಬಿಐ ತನಿಖೆಯೇ ಆಗಬೇಕು' ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News