ಶಿವಸೇನೆಯಿಂದ ಕನ್ನಡದ ಫಲಕಗಳಿಗೆ ಮಸಿ: 2ನೆ ದಿನವೂ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತ

Update: 2021-03-14 14:42 GMT

ಬೆಳಗಾವಿ, ಮಾ.14: ಮಹಾರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ಶಿವಸೇನೆ ಕಾರ್ಯಕರ್ತರು ವಾಣಿಜ್ಯ ಸಂಕೀರ್ಣಗಳ ಕನ್ನಡದ ಫಲಕಗಳಿಗೆ ಮಸಿ ಬಳಿದ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ಮಧ್ಯೆ ಪರಸ್ಪರ ಸರಕಾರಿ ಬಸ್ ಸಂಚಾರ ನಿಂತು ಹೋಗಿದೆ. 

ಈ ಮಧ್ಯೆ ಬೆಳಗಾವಿಯಲ್ಲೂ ಕರವೇ ಕಾರ್ಯಕರ್ತರು ಶಿವಸೇನಾ ಪ್ರಮುಖ ನಾಯಕನ ವಾಹನದ ಮರಾಠಾ ಬೋರ್ಡ್ ಕಿತ್ತೆಸೆದಿದ್ದು, ಮರಾಠಿಮಯ ನಾಮಫಲಕಗಳಿಗೆ ಕನ್ನಡಿಗರು ಕಪ್ಪು ಮಸಿ ಎರಚಿದ್ದಾರೆ. ಇದರಿಂದ, ನೂರಾರು ಬಸ್‍ಗಳು ನಿಂತು ಹೋಗಿದ್ದು, ಘರ್ಷಣೆ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ.   

ಚಿಕ್ಕೋಡಿ ಉಪವಿಭಾಗದ ಕೇವಲ 10 ಬಸ್‍ಗಳನ್ನು ಮಹಾರಾಷ್ಟ್ರದ ಮಿರಜ್ ಮಾರ್ಗದ ಮೂಲಕ ಪ್ರಾಯೋಗಿಕವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಅಹಿತಕರ ಘಟನೆ ಸಂಭವಿಸಿದರೆ ಮಹಾರಾಷ್ಟ್ರದ ಮಿರಜ್‍ವರೆಗೆ ಕಳುಹಿಸಿದ ಬಸ್‍ಗಳನ್ನೂ ಮಧ್ಯ ದಾರಿಯಲ್ಲೇ ಮರಳಿ ಕರೆಸಿಕೊಳ್ಳಲಾಗುವುದು ಎಂದು ಕೆಎಸ್‍ಆರ್‍ಟಿಸಿ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮಾಹಿತಿ ನೀಡಿದ್ದಾರೆ.

ಪ್ರತಿದಿನ ಚಿಕ್ಕೋಡಿ ಉಪವಿಭಾಗದಿಂದ ಮಹಾರಾಷ್ಟ್ರಕ್ಕೆ 150ಕ್ಕೂ ಹೆಚ್ಚು ಬಸ್‍ಗಳು ಮಹಾರಾಷ್ಟ್ರದ ಮಿರಜ್, ಸಾಂಗಲಿ, ಸಾತಾರ, ಕರಾಡ, ಜತ್ತ, ಕೊಲ್ಲಾಪೂರ, ಕಾಗಲ, ಇಂಚಲಕರಂಜಿ ಹೀಗೆ ಅಲ್ಲಿನ ಹಲವಾರು ತಾಲೂಕು, ಜಿಲ್ಲೆಗಳಿಗೆ ಸಂಚರಿಸುತ್ತಿದ್ದವು. ಹೀಗೆ ಎರಡು ದಿನಗಳಿಂದ ಗಡಿಯಲ್ಲಿ ಬಸ್ ಸಂಚಾರ ಇಲ್ಲದೆ, ಆ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News