ಶೋಭಾ ಕರಂದ್ಲಾಜೆಗೆ ಪತ್ರಕರ್ತರ ಪ್ರಶ್ನೆಯ ವಾರ್ತಾಭಾರತಿ ವಿಡಿಯೋವನ್ನು ತಿರುಚಿದ ಕಿಡಿಗೇಡಿಗಳು

Update: 2021-03-14 18:02 GMT

ಮಂಗಳೂರು, ಮಾ.14: ಸಿಡಿ ಪ್ರಕರಣದ ಬಗ್ಗೆ ಇತ್ತೀಚೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುವ ವಿಡಿಯೋ ತುಣುಕೊಂದನ್ನು 'ವಾರ್ತಾಭಾರತಿ' ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಿತ್ತು. ಆದರೆ ಈ ವಿಡಿಯೋವನ್ನು ಯಾರೋ ಕಿಡಿಗೇಡಿಗಳು ಡೌನ್‌ಲೋಡ್ ಮಾಡಿಕೊಂಡು ಅದನ್ನು ತಿರುಚಿ ಅದರಲ್ಲಿ ಅವಹೇಳನಕಾರಿ ಪ್ರಶ್ನೆಯೊಂದರ ಧ್ವನಿಯನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವ ವಿಷಯ ವಾರ್ತಾಭಾರತಿಯ ಗಮನಕ್ಕೆ ಬಂದಿದೆ.

ಮಾರ್ಚ್ 6ರಂದು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಸದೆ ಶೋಭಾ ಅವರ ಬಳಿ ಪತ್ರಕರ್ತರು ಸಿಡಿ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದ್ದರು. 'ಸಿಡಿ ಬಿಡುಗಡೆ ಷಡ್ಯಂತ್ರವಾಗಿದ್ದರೆ ಸಚಿವರು ಕೋರ್ಟ್ ಮೊರೆ ಹೋಗಿದ್ದು ಏಕೆ' ಎಂದು ಶೋಭಾ ಅವರ ಬಳಿ ಪತ್ರಕರ್ತರು ಪ್ರಶ್ನಿಸಿದಾಗ ಅದಕ್ಕೆ ಅವರು ಉತ್ತರಿಸಲು ನಿರಾಕರಿಸಿದ ವಿಡಿಯೋ ತುಣುಕನ್ನು 'ವಾರ್ತಾಭಾರತಿ' ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಿತ್ತು. 

ಆದರೆ ಈ ವಿಡಿಯೋವನ್ನು ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ ನಿಂದ ಡೌನ್‌ಲೋಡ್ ಮಾಡಿದ ಕಿಡಿಗೇಡಿಗಳು ಪತ್ರಕರ್ತರ ನಿಜವಾದ ಪ್ರಶ್ನೆಯನ್ನು ತೆಗೆದು ಅವಹೇಳನಕಾರಿ ಪ್ರಶ್ನೆಯೊಂದರ ಧ್ವನಿಯನ್ನು ಜೋಡಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದು ವಾರ್ತಾಭಾರತಿಯ ಗಮನಕ್ಕೆ ಬಂದಿದೆ. ಆದರೆ ಇಂತಹ ಯಾವುದೇ ಪ್ರಶ್ನೆಯನ್ನು ಅಲ್ಲಿದ್ದ ಪತ್ರಕರ್ತರು ಕೇಳಿರಲಿಲ್ಲ. ಈ ವಿಷಯವನ್ನು ವಾರ್ತಾಭಾರತಿ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಿದೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಿದೆ. 

ವಾರ್ತಾಭಾರತಿ ಪ್ರಕಟಿಸಿದ ನಿಜವಾದ ವಿಡಿಯೋ ಇಲ್ಲಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News