‘ಮದರ್ ಇಂಡಿಯಾ’ ಕೈಯಿಂದ ಕೃಷಿ ಭೂಮಿ ಕಿತ್ತುಕೊಳ್ಳುವ ಕಾನೂನು

Update: 2021-03-15 06:32 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ರೈತ’ ಎನ್ನುವ ಪದವನ್ನು ನಾವು ಸದಾ ಪುಲ್ಲಿಂಗವಾಗಿ ಬಳಸುತ್ತಾ ಬಂದಿದ್ದೇವೆ. ಈ ದೇಶದಲ್ಲಿ ಮಹಿಳಾ ರೈತರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎನ್ನುವುದು ಸ್ಪಷ್ಟವಾಗುವುದಕ್ಕೆ, ಪಂಜಾಬಿನ ರೈತ ಮಹಿಳೆಯರು ಬೀದಿಗಿಳಿಯಬೇಕಾಯಿತು. ‘ಮಹಿಳೆಯರೇಕೆ ಬೀದಿಗೆ ಬಂದಿದ್ದಾರೆ. ಅವರೇನು ರೈತರೆ?’ ಎಂದು ಈ ಸಂದರ್ಭದಲ್ಲಿ ಕೇಳಿದವರಿದ್ದಾರೆ. ಗದ್ದೆಯಲ್ಲಿ ದುಡಿಯುವ ಮಹಿಳೆಯರನ್ನು ‘ಕಾರ್ಮಿಕ’ರಾಗಿಯಷ್ಟೇ ಸಮಾಜ ನೋಡಿಕೊಂಡು ಬಂದಿದೆ. ಭೂಮಿಯ ಮೇಲೆ ಮಹಿಳೆಯರು ಕಡಿಮೆ ಹಕ್ಕು ಹೊಂದಿರುವುದು ಇಂತಹದೊಂದು ಮನಸ್ಥಿತಿ ನಮ್ಮಲ್ಲಿ ಬೆಳೆಯಲು ಕಾರಣವಾಗಿರಬಹುದು. ಕೃಷಿ ಕಾಯ್ದೆಯಿಂದ ರೈತರಿಗೆ ಆಗುವ ಸಮಸ್ಯೆಗಳು ಚರ್ಚೆಯಾಗುತ್ತಿವೆ. ಇದೇ ಸಂದರ್ಭದಲ್ಲಿ ರೈತ ಮಹಿಳೆಯರ ಮೇಲೂ ಅವು ವ್ಯತಿರಿಕ್ತವಾದ ಪರಿಣಾಮಗಳನ್ನು ಬೀರುತ್ತಿವೆ. ಆ ಸಮಸ್ಯೆಗಳೂ ಮುನ್ನೆಲೆಗೆ ಬರುವುದು ಅತ್ಯಗತ್ಯವಾಗಿದೆ.

ಭಾರತದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪುರುಷರು ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೋಗುತ್ತಿದ್ದು, ಭಾರತೀಯ ಮಹಿಳೆಯರು ಜೀವನೋಪಾಯಕ್ಕಾಗಿ ಹೊಲಗದ್ದೆಗಳಲ್ಲಿ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಭಾರತದ ಹೊಲಗಳಲ್ಲಿ ಪೂರ್ಣಾವಧಿಗೆ ದುಡಿಯುತ್ತಿರುವವರಲ್ಲಿ ಶೇ.75ರಷ್ಟು ಮಂದಿ ಮಹಿಳೆಯರೆಂದು ಅಂತರ್‌ರಾಷ್ಟ್ರೀಯ ಮಾನವತಾ ಸಂಘಟನೆ ಆಕ್ಸ್‌ಫಾಮ್ ವರದಿ ಮಾಡಿದೆ. ದಕ್ಷಿಣ ಏಶ್ಯದ ಹೊಲಗಳಲ್ಲಿ ಉತ್ಪಾದನೆಯಾಗುವ ಶೇ.60ರಿಂದ ಶೇ.80ರಷ್ಟು ಕೃಷಿ ಆಹಾರ ಉತ್ಪನ್ನಗಳನ್ನು ಮಹಿಳಾ ರೈತರೇ ಉತ್ಪಾದಿಸುತ್ತಿದ್ದಾರೆ. ಹೀಗಾಗಿ ಭಾರತ ಸರಕಾರವು ಕಳೆದ ಸೆಪ್ಟಂಬರ್‌ನಲ್ಲಿ ಜಾರಿಗೊಳಿಸಿದ ಕೃಷಿ ಸುಧಾರಣೆಗಳ ವಿರುದ್ಧ ಹಲವಾರು ತಿಂಗಳುಗಳಿಂದ ರಾಷ್ಟ್ರಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಮಹಿಳೆಯರು ಗಮನಾರ್ಹ ಪಾತ್ರ ವಹಿಸುತ್ತಿದ್ದಾರೆ. ಮೂರು ನೂತನ ಕೃಷಿ ಕಾಯ್ದೆಗಳಿಂದಾಗಿ ಸಣ್ಣ ಹಿಡುವಳಿದಾರ ರೈತರು ತೀವ್ರವಾಗಿ ಬಾಧಿತರಾಗುವ ಅಪಾಯವಿದೆ. ನೂತನ ಕೃಷಿ ಕಾಯ್ದೆಗಳು ಕೃಷಿ ಮಾರುಕಟ್ಟೆಯನ್ನು ನಿಯಂತ್ರಣ ಮುಕ್ತಗೊಳಿಸಿವೆಯಲ್ಲದೆ ಸರಕಾರವು ನಿಗದಿಪಡಿಸುವ ಬೆಳೆಗಳ ಕನಿಷ್ಠ ಮಾರಾಟದ ದರ ವ್ಯವಸ್ಥೆಯನ್ನು ಕೂಡಾ ದುರ್ಬಲಗೊಳಿಸಲಿವೆ ಎನ್ನುವುದು ಪ್ರತಿಭಟನಾಕಾರರ ಆತಂಕವಾಗಿದೆ.

ಒಂದು ವೇಳೆ ಕೃಷಿ ಕಾಯ್ದೆಗಳು ಅಸ್ತಿತ್ವಕ್ಕೆ ಬಂದಲ್ಲಿ ಭಾರತದ ಸಣ್ಣ ಹಿಡುವಳಿದಾರ ರೈತ ಮಹಿಳೆಯರು ಅತ್ಯಂತ ಸಂಕಷ್ಟಕ್ಕೀಡಾಗಲಿದ್ದಾರೆ. ಇವರಲ್ಲಿ ಇರುವುದೇ ಅಲ್ಪಸ್ವಲ್ಪ ಜಮೀನು. ಒಂದು ವೇಳೆ ಅದನ್ನು ಶತಕೋಟ್ಯಾಧಿಪತಿ ಉದ್ಯಮಗಳಿಗೆ ಉಡುಗೊರೆಯಾಗಿ ನೀಡಿದಲ್ಲಿ, ಅವರ ಬದುಕು ಮೂರಾಬಟ್ಟೆಯಾಗುತ್ತದೆ. ಗದ್ದೆಗಳಲ್ಲಿ ಬಿತ್ತನೆ ಹಾಗೂ ಕೊಯ್ಲು ನಡೆಯುವ ಬೆಳೆಋತುವಿನ ಸಮಯದಲ್ಲಿ ಮಹಿಳಾ ಕೃಷಿಕರು ಸರಾಸರಿ 3,300 ತಾಸುಗಳ ಕಾಲ ದುಡಿಯುತ್ತಾರೆ. ಇದು ಪುರುಷ ರೈತರ ಸರಾಸರಿ ದುಡಿತದ ಅವಧಿ 1,860 ತಾಸುಗಳಿಗಿಂತ ಎರಡು ಪಟ್ಟು ಅಧಿಕವಾಗಿದೆ. ಆದಾಗ್ಯೂ ತಮ್ಮ ಕುಟುಂಬಗಳಿಗೆ ತುತ್ತು ಉಣಿಸಲು ಮಹಿಳೆಯರು ನಡೆಸುವ ದುಡಿಮೆಯನ್ನು ಸರಕಾರವಾಗಲಿ, ದೇಶವಾಗಲಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪುರುಷರು ಕೃಷಿಯೇತರ ಉದ್ಯೋಗಿಗಳಾಗಿ ಬದಲಾಗುತ್ತಿರುವಾಗ, ಮಹಿಳೆಯರೇ ಕೃಷಿಯ ಚಟುವಟಿಕೆಗಳನ್ನು ತಮ್ಮ ಹೆಗಲ ಮೇಲೆ ಹೊರಬೇಕಾಗಿ ಬಂದಿದೆ. ಭಾರತದ ಮೂರನೇ ಒಂದರಷ್ಟು ರೈತ ಮಹಿಳೆಯರು ತಮ್ಮ ಪಾಲಕರು, ಪತಿಯ ಮನೆಯವರ ಒಡೆತನಕ್ಕೆ ಸೇರಿದ ಹೊಲಗಳಲ್ಲಿ ವೇತನರಹಿತ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೆ ಮಹಿಳೆಯರು ದೇಶದ ಒಟ್ಟು ಶೇ.12.8 ಕೃಷಿ ಭೂಮಿಯ ಮೇಲೆ ಮಾತ್ರ ಒಡೆತನವನ್ನು ಹೊಂದಿದ್ದಾರೆ.

ಭಾರತದಲ್ಲಿ ಶೇ.90ರಷ್ಟು ಕೃಷಿ ಜಮೀನು ವಂಶಪಾರಂಪರ್ಯವಾಗಿ ವರ್ಗಾವಣೆಗೊಳ್ಳುತ್ತದೆಯಾದರೂ ಮಹಿಳೆಯರು ತಲೆತಲಾಂತರಗಳಿಂದ ಕಾರ್ಮಿಕರಾಗಿಯೇ ಉಳಿದುಕೊಂಡಿದ್ದಾರೆ. ಅವರಿಗೆ ದುಡಿಯುವ ಜಮೀನಿನ ಒಡೆತನವೂ ಸಿಗುವುದಿಲ್ಲ ಅಷ್ಟೇ ಏಕೆ ತಮ್ಮ ಸ್ವಂತ ಮನೆಯ ಮಾಲಕತ್ವ ಕೂಡಾ ಅವರಿಗೆ ದೊರೆಯುತ್ತಿಲ್ಲ.ಆಸ್ತಿ ಹಾಗೂ ವಂಶಪಾರಂಪರ್ಯದ ಹಕ್ಕುಗಳನ್ನು ಹೊಂದಿರುವ ಮಹಿಳೆಯರು ಇತರ ರೈತ ಮಹಿಳೆಯರಿಗಿಂತ ಸರಿಸುಮಾರು ನಾಲ್ಕು ಪಟ್ಟು ಹೆಚ್ಚು ಹಣವನ್ನು ಸಂಪಾದಿಸುತ್ತಾರೆಂದು ಭೂರಹಿತರ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆ ‘ಲ್ಯಾಂಡೆಸಾ’ 2018ರ ವರದಿಯಲ್ಲಿ ತಿಳಿಸಿತ್ತು.

  ಜಮೀನು ಎನ್ನುವುದು ನಮ್ಮ ಐಡೆಂಟಿಟಿಯ ಭಾಗವೂ ಹೌದು. ಜಮೀನು ಕೃಷಿಗೆ ಮಾತ್ರವಲ್ಲದೆ, ಸಾಲ ಸೌಲಭ್ಯಗಳನ್ನು ಪಡೆಯಲು, ರೈತರ ಬೆಂಬಲಕ್ಕಿರುವ ಸರಕಾರಿ ಕಾರ್ಯಕ್ರಮಗಳು ಮತ್ತು ಪಿಂಚಣಿಗಳನ್ನು ಕೂಡಾ ಪಡೆಯಲು ಅಡಮಾನವಾಗಿ ಬಳಕೆಯಾಗುತ್ತದೆ.ಈ ಸೌಲಭ್ಯಗಳನ್ನು ಪಡೆಯಲು ರೈತರು ಕೃಷಿಭೂಮಿ ಮೇಲೆ ಹಕ್ಕನ್ನು ಹೊಂದಿರುವ ಅಗತ್ಯವಿದೆ. ಆದರೆ ಕೇವಲ ಶೇ.4ರಷ್ಟು ಮಹಿಳಾ ರೈತರು ಮಾತ್ರವೇ ಸರಕಾರ, ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಸಾಂಸ್ಥಿಕ ಸಾಲವನ್ನು ಪಡೆದಿದ್ದಾರೆಂದು ಆಕ್ಸ್‌ಫಾಮ್ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ.

 ರೈತರ ಆತ್ಮಹತ್ಯೆ ಪ್ರಕರಣಗಳ ಅಂಕಿ-ಅಂಶಗಳಲ್ಲಿ ಮಹಿಳಾ ರೈತರ ಆತ್ಮಹತ್ಯಾ ಪ್ರಮಾಣವು ಸಮರ್ಪಕವಾಗಿ ದಾಖಲಿಸಲ್ಪಡುತ್ತಿಲ್ಲ. ಮಹಿಳಾ ರೈತರು ಭೂಮಿಯ ಒಡೆತನವನ್ನು ಹೊಂದದಿರುವುದೇ ಇದಕ್ಕೆ ಕಾರಣವಾಗಿದೆ. ಆದರೆ ಆತ್ಮಹತ್ಯೆಗೆ ಶರಣಾದ ಮಹಿಳಾ ರೈತರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಸರಕಾರದ ಅಂಕಿ-ಅಂಶಗಳ ಪ್ರಕಾರ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ ಓರ್ವ ಮಹಿಳಾ ರೈತ ಆತ್ಮಹತ್ಯೆಗೆ ಶರಣಾಗುತ್ತಿದಾಳೆ.

ನೂತನ ಕೃಷಿ ಕಾನೂನುಗಳು ಯಥಾಸ್ಥಿತಿಯಲ್ಲಿ ಜಾರಿಗೆ ಬಂದಲ್ಲಿ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಸರಕಾರದ ನಿಯಂತ್ರಣದಲ್ಲಿರುವ ಮಧ್ಯವರ್ತಿ ಸಂಸ್ಥೆ (ಎಪಿಎಂಸಿ) ರದ್ದಾಗಲಿದೆ. ಹೀಗಾದಲ್ಲಿ ರೈತ ಮಹಿಳೆಯರಿಗೆ ಪುರುಷ ರೈತರಿಗಿಂತಲೂ ಹೆಚ್ಚು ಪ್ರತಿಕೂಲ ಪರಿಣಾಮವುಂಟಾಗಲಿದೆ. ಮಹಿಳೆಯರಿಗೆ ಸರಕಾರದ ನಿಯಂತ್ರಣದಲ್ಲಿರುವ ಎಪಿಎಂಸಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ನಿರ್ಧರಿಸಲು ಹೆಚ್ಚು ಅವಕಾಶಗಳನ್ನು ನೀಡುತ್ತವೆ. ಎಪಿಎಂಸಿಯಿಂದಾಗಿ ಮಹಿಳೆಯರು ತಮ್ಮ ಬೆಳೆಗಳ ದರಗಳಿಗಾಗಿ ವರ್ತಕರೊಂದಿಗೆ ಚೌಕಾಸಿ ಮಾಡುವ ಅಗತ್ಯವಿರುವುದಿಲ್ಲ.

ಮುಕ್ತ ಮಾರುಕಟ್ಟೆಯು ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ನೀಡುತ್ತದೆ. ಇದರಿಂದಾಗಿ ಉತ್ತಮ ಬೆಲೆ ದೊರೆಯುತ್ತದೆ ಎಂದು ಮೋದಿ ಸರಕಾರ ಪ್ರತಿಪಾದಿಸುತ್ತಿದೆ. ಆದರೆ ಭಾರತದಲ್ಲಿ ಲಿಂಗ ಅಸಮಾನತೆಯು ಬಲವಾಗಿ ಬೇರೂರಿದೆ. ಮಹಿಳೆಯರು ಪುರುಷರ ಹಾಗೆ ಹೆಚ್ಚು ದೂರ ಪ್ರಯಾಣಿಸುವುದು ತೀರಾ ಕಷ್ಟಕರವಾಗಿದೆ. ಹೀಗಾಗಿ ಮಹಿಳೆಯರ ಕೃಷಿಉತ್ಪನ್ನಗಳಿಗೆ ಮಾರುಕಟ್ಟೆಗಳ ಲಭ್ಯತೆಯ ಅವಕಾಶವು ಇನ್ನಷ್ಟು ಸೀಮಿತವಾಗಲಿದೆ. ಭಾರತದ ಕೃಷಿ ಸುಧಾರಣೆಗಳು ಕೃಷಿ ಸಂಬಂಧಿತ ವ್ಯಾಜ್ಯಗಳನ್ನು ಬಗೆಹರಿಸುವ ಮಹಿಳೆಯರ ಸಾಮರ್ಥ್ಯಕ್ಕೆ ಧಕ್ಕೆಯುಂಟು ಮಾಡಲಿವೆ.

ಯಾಕೆಂದರೆ ನೂತನ ಕೃಷಿ ಕಾಯ್ದೆಯಡಿ ರೈತರು ಮತ್ತು ವರ್ತಕರು ಅಥವಾ ಕೃಷಿ ಉದ್ಯಮ ಸಂಸ್ಥೆಗಳ ನಡುವಿನ ವ್ಯಾಜ್ಯಗಳನ್ನು ನೂತನ ಕೃಷಿ ಮಂಡಳಿಯು ಇತ್ಯರ್ಥಪಡಿಸಲಿದೆಯೇ ಹೊರತು ಈಗ ಇರುವಂತೆ ಕೃಷಿ ಕೋರ್ಟ್‌ಗಳಲ್ಲ. ‘ಮದರ್ ಇಂಡಿಯಾ’ ಎನ್ನುವ ಹಳೆಯ ಸಿನೆಮಾವೊಂದರಲ್ಲಿ ಒಬ್ಬ ರೈತ ಮಹಿಳೆ ಹೇಗೆ ತನ್ನ ರಕ್ತವನ್ನು ಸುರಿಸಿ ಭೂಮಿಯನ್ನು ಹಸನುಗೊಳಿಸಿ ಗೆದ್ದಳು ಎನ್ನುವ ಕತೆಯಿದೆ. ಆ ಸಿನೆಮಾವನ್ನು ಶ್ರೇಷ್ಠ ಸಿನೆಮಾವಾಗಿ ಇಂದಿಗೂ ಗುರುತಿಸುತ್ತಿದ್ದಾರೆ. ಆದರೆ ಇದೀಗ ನೂತನ ಕಾಯ್ದೆ ಮದರ್ ಇಂಡಿಯಾ ಕೈಯಿಂದ ಭೂಮಿಯನ್ನು ಕಿತ್ತು ಅವರನ್ನು ಬೀದಿಪಾಲು ಮಾಡುವುದಕ್ಕೆ ಮುಂದಾಗಿದೆ. ಮದರ್ ಇಂಡಿಯಾ ಸಿನೆಮಾದ ಎರಡನೇ ಭಾಗವೇನಾದರೂ ಬಂದರೆ, ಅಲ್ಲಿ ನಟಿ ನರ್ಗೀಸ್ ಅವರು ನೇಣು ಹಾಕಿಕೊಳ್ಳಬೇಕಾದ ಪಾತ್ರವೊಂದಕ್ಕೆ ಜೀವತುಂಬಬೇಕಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News