ನಿಮ್ಮ ಕುರ್ಚಿಯಲ್ಲಿ ಬಂದು ಕೂರುವ ದಿನಗಳು ದೂರವಿಲ್ಲ, 'ವಿ ವಿಲ್ ಕಮ್ ಬ್ಯಾಕ್': ಸದನದಲ್ಲಿ ಸಿದ್ದರಾಮಯ್ಯ
ಬೆಂಗಳೂರು,ಮಾ. 15: ರಾಜ್ಯದ ಇತಿಹಾಸದಲ್ಲಿ ಇಂತಹ ಅಭಿವೃದ್ದಿ ವಿರೋಧಿ ಬಜೆಟ್ ಯಾವತ್ತೂ ಮಂಡನೆಯಾಗಿಲ್ಲ. ಯಡಿಯೂರಪ್ಪ ಮಂಡಿಸಿದ ಬಜೆಟ್ನಲ್ಲಿ ಯಾವುದೇ ಆರ್ಥಿಕ ಶಿಸ್ತು ಕಾಯ್ದುಕೊಕೊಂಡಿಲ್ಲ. ವಿತ್ತೀಯ ನಿಯಮಗಳನ್ನ ಗಾಳಿಗೆ ತೂರಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಇಂದು ಸದನದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಡಬಲ್ ಎಂಜಿನ್ ಸರಕಾರ, ಸ್ವರ್ಗ ನಿರ್ಮಾಣ ಆಗುತ್ತೆ ಎಂದು ಹೇಳಿದ್ದರು. ಇದೇನಾ ನಿಮ್ಮ ಸ್ವರ್ಗ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಇದನ್ನ ಒಳ್ಳೆಯ ಬಜೆಟ್ ಅಂದು ಯಾವ ಆರ್ಥಿಕ ತಜ್ಞನೂ ಕರೆಯಲು ಆಗಲ್ಲ. ರಾಜ್ಯದ ಇತಿಹಾಸದಲ್ಲಿ ಇಂತಹ ಕೆಟ್ಟ ಬಜೆಟ್ ನೋಡಿಲ್ಲ ಎಂದರು. ಈ ವೇಳೆ ಯಡಿಯೂರಪ್ಪ, ಈ ವೇಳೆ ನೀವು ಬಜೆಟ್ ಮಂಡನೆ ಮಾಡಿದಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, “ನಾನು ಅಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೆ ಎಂದು ಮಾಡಿ ತೋರಿಸುತ್ತಿದ್ದೆ. ನನಗೆ ಆ ಜಾಗ ಬಿಟ್ಟುಕೊಡಿ, ಅಲ್ಲಿದ್ದು ನಾನು ಹೇಳುತ್ತೇನೆ” ಎಂದು ಹೇಳಿದರು.
ಜನ ನಮಗೆ ಅಧಿಕಾರ ಕೊಡುತ್ತಾರೆ. 1947ರಿಂದಲೂ ಒಬ್ಬರೇ ಕುರ್ಚಿಗೆ ಅಂಟಿ ಕೂತಿಲ್ಲ. ಬದಲಾವಣೆಗಳಾಗಿವೆ. ನಾವು ವಾಪಸ್ ಅಧಿಕಾರಕ್ಕೆ ಬಂದೇ ಬರುತ್ತೇವೆ. ಜನ ಮುಂದಿನ ಸಲ ನಮಗೆ ಅಧಿಕಾರ ಕೊಟ್ಟೇ ಕೊಡುತ್ತಾರೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ನಾವು ನಿಮ್ಮ ಕುರ್ಚಿಯಲ್ಲಿ ಬಂದು ಕೂರುವ ದಿನಗಳು ದೂರ ಇಲ್ಲ. ವಿ ವಿಲ್ ಕಮ್ ಬ್ಯಾಕ್ ಎಂದು ತಿರುಗೇಟು ನೀಡಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ನನ್ನ ದಾರಿ ತಪ್ಪಿಸಲು ಎದ್ದು ನಿಲ್ಲುತ್ತೀಯಾ ಬೊಮ್ಮಾಯಿ. ನಾನು ದಾರಿ ತಪ್ಪುವವನಲ್ಲ ಎಂದು ಹೇಳಿದರು.