×
Ad

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ 'ಟೋಲ್‍': ಅನಗತ್ಯ, ಅವೈಜ್ಞಾನಿಕ ಟೋಲ್ ಗೆ ಕಡಿವಾಣ ಹಾಕಲು ಪ್ರತಿಪಕ್ಷಗಳ ಆಗ್ರಹ

Update: 2021-03-15 18:16 IST

ಬೆಂಗಳೂರು, ಮಾ. 15: ‘ಹೆದ್ದಾರಿಗಳಲ್ಲಿ ನಿಯಮ ಪಾಲಿಸದೆ ಅನಗತ್ಯ ಮತ್ತು ಅವೈಜ್ಞಾನಿಕವಾಗಿ ಟೋಲ್‍ಗಳನ್ನು ಸ್ಥಾಪಿಸಿ ಬಳಕೆದಾರರ ಶುಲ್ಕ ವಸೂಲಿ ನೆಪದಲ್ಲಿ ಜನರ ಸುಲಿಗೆ ಮಾಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು' ಎಂದು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಒಕ್ಕೂರಲಿನಿಂದ ಒತ್ತಾಯಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಡಾ.ಜಿ. ಪರಮೇಶ್ವರ್, ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ-3 ಹಾಗೂ 33ರಲ್ಲಿ ರಸ್ತೆ ಬಳಕೆದಾರರಿಂದ 5 ಟೋಲ್ ಸ್ಥಾಪಿಸಲಾಗಿದೆ. ನಿಯಮಾವಳಿಗಳ ಅನ್ವಯ 2 ಟೋಲ್ ಪ್ಲಾಜಾಗಳ ಅಂತರ ಕನಿಷ್ಠ 60 ಕಿ.ಮೀ ಇರಬೇಕು. ಆದರೆ, 21 ಕಿ.ಮೀ. ವ್ಯಾಪ್ತಿಯಲ್ಲೆ 2 ಟೋಲ್ ಪ್ಲಾಜಾಗಳಿವೆ. ನಾವೇ ಮಾಡಿಕೊಂಡಿರುವ ನಿಯಮವನ್ನು ಉಲ್ಲಂಘನೆ ಸರಿಯಲ್ಲ ಎಂದು ಆಕ್ಷೇಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ರಾಘವೇಂದ್ರ ಹಿಟ್ನಾಳ್ ಹಾಗೂ ಜೆಡಿಎಸ್‍ನ ನಾಡಗೌಡ ಹೊಸಪೇಟೆ ಬಳಿ 7 ಕಿ.ಮೀ. ಅಂತರದಲ್ಲಿ 2 ಟೋಲ್‍ಗಳಿವೆ. ಜೆಡಿಎಸ್ ಸದಸ್ಯ ಡಾ.ಶ್ರೀನಿವಾಸಮೂರ್ತಿ, ನನ್ನ ಕ್ಷೇತ್ರದಲ್ಲಿ ಕೇವಲ 8 ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ಟೋಲ್‍ಗಳಿದ್ದು, ಜನರಿಂದ ಸುಲಿಗೆ ಮಾಡಲಾಗುತ್ತಿದೆ ಎಂದು ಸದನದ ಗಮನ ಸೆಳೆದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಹೆದ್ದಾರಿಗಳಲ್ಲಿ ಟೋಲ್‍ಗಳನ್ನು ಅವೈಜ್ಞಾನಿಕ, ಅನಗತ್ಯವಾಗಿ ಕೆಲವೆಡೆ ಹಾಕಿರುವುದು ಬೆಳಕಿಗೆ ಬಂದಿದೆ. ಬಳಕೆದಾರರ ಶುಲ್ಕ ವಸೂಲಿ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಜನರಿಂದ ಸುಲಿಗೆ ಸರಿಯಲ್ಲ. ಹೀಗಾಗಿ ಈ ಸಂಬಂಧ ಮತ್ತೊಮ್ಮೆ ಸರ್ವೆ ಮಾಡಿ ಅವೈಜ್ಞಾನಿಕ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಿ, ವೈಜ್ಞಾನಿಕವಾಗಿ ಟೋಲ್‍ಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಪರಿಶೀಲನೆ: ಬಳಿಕ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಟೋಲ್ ಪ್ಲಾಜಾಗಳ ಅಂತರದ ಬಗ್ಗೆ ಮತ್ತೊಮ್ಮೆ ಅಂತರವನ್ನು ಪರಿಶೀಲಿಸಲು ಕ್ರಮ ಕೈಗೊಳ್ಳುತ್ತೇನೆ. ರಾಜ್ಯ ಹೆದ್ದಾರಿಗಳು ನಮ್ಮ ವ್ಯಾಪ್ತಿಗೆ ಬರಲಿದ್ದು, ರಾಷ್ಟ್ರೀಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದ್ದು, ಅಲ್ಲಿನ ಅಧಿಕಾರಿಗಳನ್ನು ಕರೆದು ಅವರೊಂದಿಗೆ ಚರ್ಚಿಸಿ ಸಮಸ್ಯೆ ಸರಿಪಡಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.

ವಾಹನ ನೋಂದಣಿ ಸಂದರ್ಭದಲ್ಲಿ ವಾಹನದ ಜೀವಾವಧಿ ರಸ್ತೆ ತೆರಿಗೆ ಸಂಗ್ರಹ ಮಾಡಿದ ನಂತರವೂ ಪುನಃ ಟೋಲ್‍ಗಳಲ್ಲಿ ರಸ್ತೆ ಬಳಕೆದಾರರ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ ಎಂದು ಡಾ.ಜಿ. ಪರಮೇಶ್ವರ್ ಆಕ್ಷೇಪಿಸಿದರು. ಇದಕ್ಕೆ ಉತ್ತರ ನೀಡಿದ ಗೋವಿಂದ ಕಾರಜೋಳ, ರಸ್ತೆ ಅಭಿವೃದ್ಧಿಗೆ ಸರಕಾರ ವಿವಿಧ ರೂಪದಲ್ಲಿ ಸಾಲ ತಂದಿರುತ್ತದೆ. ಹೀಗಾಗಿ ಅದನ್ನು ಮರು ಪಾವತಿಸಲು ಬಳಕೆದಾರರ ಶುಲ್ಕ ವಸೂಲಿ ಅನಿವಾರ್ಯ. ಇಲ್ಲವಾದರೆ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದು ಸಮರ್ಥಿಸಿದರು.

‘ಹೆದ್ದಾರಿಗಳಲ್ಲಿ 60 ಕಿ.ಮೀಗೆ ಒಂದು ಟೋಲ್ ಪ್ಲಾಜಾ ಹಾಕಬೇಕೆಂಬ ನಿಯಮವಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದನ್ನು ನಿರ್ವಹಣೆ ಮಾಡುತ್ತದೆ. ಎಲ್ಲೆಲ್ಲಿ ಈ ರೀತಿ ತೊಂದರೆ ಇದೆಯೋ ಅದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುತ್ತೇನೆ. ಅವೈಜ್ಞಾನಿಕ ಟೋಲ್‍ಗಳಿದ್ದರೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು'

-ಗೋವಿಂದ ಎಂ.ಕಾರಜೋಳ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News