×
Ad

ಮೀಸಲಾತಿ ಕಲ್ಪಿಸುವ ಬಗ್ಗೆ ಸಿಎಂ ಭರವಸೆ: 64 ದಿನಗಳ ಹೋರಾಟ ಅಂತ್ಯಗೊಳಿಸಿದ ಪಂಚಮಸಾಲಿ ಶ್ರೀ

Update: 2021-03-15 18:24 IST
ಫೈಲ್ ಚಿತ್ರ

ಬೆಂಗಳೂರು, ಮಾ. 15: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂ.ವರ್ಗಗಳ ಪ್ರವರ್ಗ ‘2ಎ'ಗೆ, ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮತ್ತು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಉನ್ನತ ಸಮಿತಿ ವರದಿಯನ್ನು ಆರೇಳು ತಿಂಗಳಲ್ಲಿ ಪಡೆದು, ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಆ ಹಿನ್ನೆಲೆಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠದ ಪೀಠಾಧಿಪತಿ ಬಸವ ಶ್ರೀ ಜಯಮೃತ್ಯುಂಜಯ ಸ್ವಾಮಿಯವರು ತಮ್ಮ ಸಮುದಾಯಕ್ಕೆ ‘2ಎ' ಮೀಸಲಾತಿಗಾಗಿ ಆಗ್ರಹಿಸಿ 64 ದಿನಗಳಿಂದ ಕೈಗೊಂಡಿದ್ದ ಹೋರಾಟವನ್ನು ‘ಶೇಂಗಾ ಹೋಳಿಗೆ' ಸೇವಿಸಿ, ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಅಂತ್ಯಗೊಳಿಸಿದ್ದಾರೆ.

ಸೋಮವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ಲಿಂಗಾಯತ ಪಂಚಮಸಾಲಿ ಸಮುದಾಯದ ಶೈಕ್ಷಣಿಕ ಹಾಗೂ ಉದ್ಯೋಗಕ್ಕೆ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರಕಾರ ಮನಸು ಮಾಡಿದರೆ ಲಿಂಗಾಯತ ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಈಡೇರಿಸಬಹುದು. ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಸರಕಾರ ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಸಮುದಾಯದ ಶ್ರೀಗಳು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದು, ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆಂದು ಯತ್ನಾಳ್ ಗಮನ ಸೆಳೆದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಉನ್ನತ ಸಮಿತಿ ರಚನೆ ಮಾಡಿದ್ದು, ಇನ್ನು ಆರೇಳು ತಿಂಗಳಲ್ಲಿ ವರದಿ ಬರಲಿದೆ. ವರದಿ ಪರಿಶೀಲನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸರಕಾರ ಎಲ್ಲ ಸಮುದಾಯಗಳ ಮೀಸಲಾತಿ ಪರವಾಗಿದೆ. 2ಎ ಮೀಸಲಾತಿಗೆ ಒತ್ತಾಯಿಸಿ ಸತ್ಯಾಗ್ರಹ ಕೈಗೊಂಡಿರುವ ಕೂಡಲಸಂಗಮದ ಪಂಚಮಸಾಲಿ ಮಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಮ್ಮ ಧರಣಿಯನ್ನು ಕೂಡಲೇ ಕೈ ಬಿಡಬೇಕು. ಸರಕಾರದೊಂದಿಗೆ ಸಹಕರಿಸಬೇಕು ಎಂದು ಯಡಿಯೂರಪ್ಪ ಇದೇ ವೇಳೆ ಮನವಿ ಮಾಡಿದರು.

ಇದಕ್ಕೆ ದನಿಗೂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರಕಾರದ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ವರದಿ ಬಂದ ಬಳಿಕ ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಲಿದೆ. ಸರಕಾರ ಎಲ್ಲರ ಬೇಡಿಕೆಗಳಿಗೂ ಸ್ಪಂದಿಸಲಿದೆ ಎಂದು ಸ್ಪಷ್ಟಪಡಿಸಿದರು.

ಇತ್ಯರ್ಥವಾಗದಿದ್ದರೆ ಮತ್ತೆ ಹೋರಾಟದ ಎಚ್ಚರಿಕೆ: ಉನ್ನತ ಸಮಿತಿ ನೀಡುವ ವರದಿಗೆ ಬಲವಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಆರು ತಿಂಗಳೊಳಗೆ ತರಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು. ಇದಕ್ಕೆ ಸಿಎಂ ಯಡಿಯೂರಪ್ಪನವರು ಸಹಮತ ವ್ಯಕ್ತಪಡಿಸಿದ್ದು, ಸಮಾಧಾನ ತಂದಿದೆ. ಇನ್ನು 6 ತಿಂಗಳಲ್ಲಿ ಮೀಸಲಾತಿ ವಿಷಯ ಇತ್ಯರ್ಥವಾಗದಿದ್ದರೆ ಪುನಃ ಹೋರಾಟ ನಡೆಸಲಾಗುವುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲೇ ಸಿಎಂಗೆ ಎಚ್ಚರಿಕೆ ನೀಡಿದರು. ಅಲ್ಲದೆ, ಸಮುದಾಯದ ಶ್ರೀಗಳು ತಮ್ಮ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

‘ವಿಧಾನ ಮಂಡಲ ಅಧಿವೇಶನದಲ್ಲೇ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಹೋರಾಟ ಆರಂಭಿಸಿದ್ದು, 64 ದಿನಗಳ ಸುದೀರ್ಘ ಅವಧಿ ಚಳವಳಿ ನಡೆಸಿದ್ದೇವೆ. ಇದೀಗ ಸಿಎಂ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಇನ್ನು ಆರು ತಿಂಗಳ ಒಳಗೆ ನಮ್ಮ ಬೇಡಿಕೆ ಈಡೇರಿಸಿದ್ದರೆ ಸಮುದಾಯದ ಬೃಹತ್ ಸಮಾವೇಶ ನಡೆಸಿ ಪ್ರಧಾನಿಯವರಿಗೆ ಮನವಿ ಸಲ್ಲಿಸಲಾಗುವುದು'

-ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿ, ಕೂಡಲ ಸಂಗಮ ಪಂಚಮಸಾಲಿ ಪೀಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News