ಸಚಿವರು ಕೋರ್ಟ್ ಮೆಟ್ಟಿಲೇರಿದ ವಿಚಾರ: ಪರಿಷತ್‍ನಲ್ಲಿ ಆಡಳಿತ-ಪ್ರತಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ವಾಗ್ವಾದ

Update: 2021-03-15 13:17 GMT

ಬೆಂಗಳೂರು, ಮಾ.15: ಮಾಜಿ ಸಚಿವರೊಬ್ಬರಿಗೆ ಸಂಬಂಧಿಸಿದ್ದೆನ್ನಲಾದ ಅಶ್ಲೀಲ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ರಾಜ್ಯದ ಆರು ಸಚಿವರು ತಮ್ಮ ವಿರುದ್ಧ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಮಧ್ಯಂತರ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಅವರಿಗೆ ಪರಿಷತ್‍ನಲ್ಲಿ ಪ್ರಶ್ನೆಯನ್ನು ಕೇಳಬಾರದೆಂದು ತೀರ್ಮಾನ ಮಾಡಿದ್ದೇವೆ ಎಂದು ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಅವರು ಹೇಳುತ್ತಿದ್ದಂತೆಯೇ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಭಾರೀ ವಾಗ್ವಾದ ನಡೆಯಿತು.

ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಲು ಕೋರಿ ಸಚಿವರಾದ ಕೆ.ಸುಧಾಕರ್, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್ ಅವರು ಕೋರ್ಟ್ ಗೆ ಹೋಗಿದ್ದು, ಇವರೆಲ್ಲರೂ ಈಗ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ, ಆರೋಗ್ಯ ಸಚಿವ ಕೆ.ಸುಧಾಕರ್ ಗೆ ಕೇಳಬೇಕಾಗಿದ್ದ ಪ್ರಶ್ನೆಯನ್ನು ಕೇಳುವುದಿಲ್ಲ ಎಂದು ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರಾದ ಬಿ.ಸಿ.ಪಾಟೀಲ್, ನಾರಾಯಣಗೌಡ, ಶಿವರಾಮ್ ಹೆಬ್ಬಾರ್, ಕೆ.ಸುಧಾಕರ್ ಅವರು ತಾವು ಕೋರ್ಟ್ ಗೆ ಹೋಗಿ ತಡೆ ತಂದಿರುವ ಬಗ್ಗೆ ಸಮರ್ಥಿಸಿಕೊಂಡರು.

ಕೋರ್ಟ್ ಗೆ ಹೋದ ಸಚಿವರು ನಾಚಿಕೆ ಇಲ್ಲದೆ ಸದನದ ಒಳಕ್ಕೆ ಬಂದಿದ್ದಾರೆ. ಇದರಿಂದ, ಸದನದ ಗೌರವ ಹಾಳಾಗಿದೆ ಎಂದು ಎಂ.ನಾರಾಯಣಸ್ವಾಮಿ ಕಿಡಿಕಾರುತ್ತಿದ್ದಂತೆಯೇ ಇದಕ್ಕೆ ಧ್ವನಿಗೂಡಿಸಿದ ಪ್ರತಿ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುತ್ತೀರಾ ನೀವು ಎಂದು ಕೋರ್ಟ್ ಗೆ ಹೋದ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಎಲ್ಲ ವಾಗ್ವಾದಗಳು ಕಡತಕ್ಕೆ ಹೋಗುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News