ನೀವು ಅಧಿಕಾರಕ್ಕೆ ಬರುವುದು ತಿರುಕನ ಕನಸು: ಸಿದ್ದರಾಮಯ್ಯಗೆ ಸಿಎಂ ಯಡಿಯೂರಪ್ಪ ತಿರುಗೇಟು
ಬೆಂಗಳೂರು, ಮಾ.15: ಮುಂದಿನ ಚುನಾವಣೆಯಲ್ಲಿ ನೀವು ಅಧಿಕಾರಕ್ಕೆ ಬರುತ್ತೇನೆ ಎಂದು ತಿರುಕನ ಕನಸು ಕಾಣುತ್ತಿದ್ದೀರಾ. ನಾನು ಕೊಟ್ಟಿರುವ ಬಜೆಟ್ ಅನ್ನು ರಾಜ್ಯದ ಜನ ಮೆಚ್ಚಿದ್ದಾರೆ. ಇದರ ಆಧಾರದ ಮೇಲೆಯೇ ಮುಂದಿನ ಮೂರು ವಿಧಾನಸಭಾ ಹಾಗೂ ಒಂದು ಲೋಕಸಭಾ ಉಪಚುನಾವಣೆಯನ್ನು ಗೆದ್ದು ಬರುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾನು ಇದೇ ಬಜೆಟ್ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತೇನೆ. ನೀವು ಇದೇ ವಿಚಾರ ಪ್ರಸ್ತಾಪಿಸಿ ನೋಡೋಣ. ಚುನಾವಣೆಯಲ್ಲಿ ಗೆದ್ದು ಬಂದ ನಂತರ ಮತ್ತೆ ಇಲ್ಲೆ ಈ ಬಗ್ಗೆ ಮಾತನಾಡೋಣ ಎಂದರು.
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿದ್ದಾಗ ಉಪ ಚುನಾವಣೆಗಳನ್ನು ಗೆದ್ದಿದ್ದೇನೆ. ಆಪರೇಷನ್ ಕಮಲದ ಮೂಲಕ ನೀವು ಅಧಿಕಾರಕ್ಕೆ ಬಂದದ್ದು. ನಿಮಗೆ ಅಷ್ಟೇ ವಿಶ್ವಾಸ ಇದ್ದರೆ, ವಿಧಾನಸಭೆ ವಿಸರ್ಜಿಸಿ ಬನ್ನಿ ಚುನಾವಣೆಗೆ ಹೋಗೋಣ. ಜನ ಯಾರನ್ನು ಆಯ್ಕೆ ಮಾಡುತ್ತಾರೋ ನೋಡೋಣ ಎಂದರು.
ಶಾಸಕರನ್ನು ಕಳುಹಿಸಿದ್ದು ನೀವೇ ಅಲ್ಲವೇ?: ಶಾಸಕರನ್ನು ನಮ್ಮ ಬಳಿ ಕಳುಹಿಸಿದ್ದು ನೀವೆ ಅಲ್ಲವೇ? ಎಂದು ಮುಖ್ಯಮಂತ್ರಿ ಆರೋಪಿಸಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಕಳುಹಿಸುವುದಾದರೆ ನೇರವಾಗಿ ಕಳುಹಿಸುತ್ತಿದ್ದೆ. ಯಾರಿಗೂ ಹೆದರುತ್ತಿರಲಿಲ್ಲ. ಅಂತಹ ದರಿದ್ರ ಪರಿಸ್ಥಿತಿ ನನಗೆ ಬಂದಿಲ್ಲ. ಈಗ ಅವರು(ಬಿಜೆಪಿ) ವಾಪಸ್ ಕಳುಹಿಸಿದರೂ ನಾವು ತೆಗೆದುಕೊಳ್ಳಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನಮ್ಮ ರಾಜಕೀಯ ಜೀವನದಲ್ಲಿ ಅಂತಹ ಪಾಪದ ಕೆಲಸ ಮಾಡಲ್ಲ. ನೇರವಾಗಿ ರಾಜಕೀಯ ಮಾಡಿಕೊಂಡು ಬಂದಿರುವವನು ನಾನು. ಅದರಲ್ಲಿ ರಾಜಿ ಇಲ್ಲ ಎಂದರು.
ಒಳ್ಳೆಯ ಕೆಲಸ ಮಾಡಿಲ್ಲ ಅಂತ ಜನ ನಿಮ್ಮನ್ನು ಸೋಲಿಸಿದ್ದು. ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಝಮೀರ್ ಅಹ್ಮದ್ ಖಾನ್, ನೀವು ಗೆದ್ದಿದ್ದು 104 ಮಾತ್ರ. ರಾಜ್ಯದ ಜನ ನಿಮಗೂ ಪೂರ್ಣ ಬಹುಮತ ನೀಡಿರಲಿಲ್ಲ. ಶಾಸಕರನ್ನು ಹಿಡಿದಿಟ್ಟುಕೊಳ್ಳಲು ನಮ್ಮ ಬಳಿ ಅಷ್ಟೊಂದು ದುಡ್ಡು ಇಲ್ಲವಲ್ಲ ಸ್ವಾಮಿ ಏನು ಮಾಡೋದು ಎಂದರು.
ಒಂದು ಕೆಲಸ ಮಾಡೋಣ, ಸಂವಿಧಾನಕ್ಕೆ ತಿದ್ದುಪಡಿ ತಂದು, ಕಾಂಗ್ರೆಸ್ ಪಕ್ಷ ಯಾವಾಗ ಬಯಸುತ್ತದೆಯೋ ಆವಾಗ, ಚುನಾವಣೆಗೆ ಹೋಗೋಣ ಎಂದು ಈಶ್ವರಪ್ಪ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ಕಳೆದ ಆರು ವರ್ಷಗಳಲ್ಲಿ ಬಿಜೆಪಿ ಉತ್ತರಪ್ರದೇಶ ಹೊರತುಪಡಿಸಿ ಬೇರೆ ಯಾವ ರಾಜ್ಯಗಳಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈಡಿ, ಐಟಿ, ಆಪರೇಷನ್ ಕಮಲದ ಮೂಲಕವೇ ಸರಕಾರಗಳನ್ನು ರಚನೆ ಮಾಡಿರುವುದು ಎಂದರು.
‘ಬಾದಾಮಿಯಿಂದಲೇ ಸ್ಪರ್ಧೆ’ ಸಿದ್ದರಾಮಯ್ಯ: ನೀವು ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತೀರೋ ಇಲ್ಲವೋ ಎಂಬ ಸಂಶಯ ಇದೆ. ಅದನ್ನು ಸ್ಪಷ್ಟಪಡಿಸಿ ಬಿಡಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಪಲಾಯನ ಮಾಡಲ್ಲ. ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತೇನೆ ಎಂದರು.
ಆಗ ಕಂದಾಯ ಸಚಿವ ಅಶೋಕ್ ಮಧ್ಯಪ್ರವೇಶಿಸಿ ಎಲ್ಲಿಂದ ಸ್ಪರ್ಧೆ ಮಾಡುತ್ತೀರಾ ಎಂದು ಹೇಳಿ ಸರ್ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪದ್ಮನಾಭನಗರ(ಅಶೋಕ್ ಪ್ರತಿನಿಧಿಸುವ ಕ್ಷೇತ್ರ) ಎಂದರು. ಆಗ ಅದು ಬೇಡ ಸರ್ ಅಲ್ಲಿ ದೊಡ್ಡವರು ಇದ್ದಾರೆ ಎಂದರು. ನಾನು ಬಾದಾಮಿಯನ್ನು ಪ್ರತಿನಿಧಿಸುತ್ತಿದ್ದೇನೆ. ಅಲ್ಲೆ ನಿಂತುಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ವೇಳೆ ಜೆಡಿಎಸ್ ಹಿರಿಯ ಸದಸ್ಯ ಎಚ್.ಎಂ.ರೇವಣ್ಣ ಮಧ್ಯಪ್ರವೇಶಿಸಿ, 2023ರ ವಿಧಾನಸಭಾ ಚುನಾವಣೆಗೆ ಶಿವಮೊಗ್ಗಕ್ಕೆ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ. ಈಗ ಸಿಂಧಗಿಯಲ್ಲೂ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ ಎಂದರು. ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲ್ಲ. ಆದುದರಿಂದ, ಅವರಿಗೆ ಯಾವಾಗಲೂ ಬೇಡಿಕೆ ಇದ್ದೆ ಇರುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.