ಭಜನಾ ಮಂದಿರ, ಶ್ರದ್ಧಾ ಕೇಂದ್ರಗಳ ನೋಂದಣಿಗೆ ಅವಕಾಶವಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು, ಮಾ. 15: ‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾ ದತ್ತಿಗಳ ಅಧಿನಿಯಮ 1997ರ ಕಲಂ 53ರಡಿ, 23ನೆ ಪ್ರಕರಣದಡಿ ಅಧಿಸೂಚಿತ ದೇವಸ್ಥಾನಗಳನ್ನು ಹೊರತುಪಡಿಸಿ ಭಜನಾ ಮಂದಿರಗಳು ಹಾಗೂ ಶ್ರದ್ಧಾ ಕೇಂದ್ರಗಳನ್ನು ನೋಂದಾಯಿಸಲು ಅವಕಾಶವಿಲ್ಲ. ಭಕ್ತರು ಭಜನಾ ಮಂದಿರಗಳ ನೋಂದಣಿಗೆ ವಿರೋಧವಿದ್ದಾರೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು' ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸಪೂಜಾರಿ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಸಂಜೀವ ಮಠಂದೂರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸಾರ್ವಜನಿಕ ಭಜನಾ ಮಂದಿರಗಳು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿದ್ದು, ಅವುಗಳನ್ನು ಧಾರ್ಮಿಕ ದತ್ತಿ ಕಾಯ್ದೆಯಡಿ ನೋಂದಣಿಯಾಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮೇಲ್ಕಂಡ ಅಧಿನಿಯಮದ ಪ್ರಕಾರ 2011ರ ಪ್ರಾರಂಭದ ದಿನದಿಂದ 90 ದಿನಗಳ ಒಳಗೆ ದೇವಸ್ಥಾನವು ಯಾರ ಅಧಿಕಾರ ವ್ಯಾಪ್ತಿಗೆ ಬರುತ್ತದೆಯೋ ಅಂತಹ ಸಹಾಯಕ ಆಯುಕ್ತರಿಗೆ ದೇವಸ್ಥಾನದ ನೋಂದಣಿಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಅದರನ್ವಯ ದೇವಾಲಯಗಳನ್ನು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ವಿವರಣೆ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಸಂಜೀವ್ ಮಠಂದೂರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸಾರ್ವಜನಿಕ ಭಜನಾ ಮಂದಿರಗಳು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿದ್ದು, ಅವುಗಳನ್ನು ಧಾರ್ಮಿಕ ಮತ್ತು ದತ್ತಿ ಇಲಾಖೆಯಡಿ ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ಸರಕಾರಕ್ಕೆ ಅನುಕೂಲವಾಗಲಿದೆ ಎಂದು ಗಮನ ಸೆಳೆದರು.