ಆನ್‌ಲೈನ್ ಶಾಪಿಂಗ್ ನಲ್ಲಿ ಬಹುಮಾನದ ಆಫರ್: 3 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗದ ಮಹಿಳೆ

Update: 2021-03-15 15:07 GMT

ಶಿವಮೊಗ್ಗ, ಮಾ.15: ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಮೂರು ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಹುಮಾನಕ್ಕೆ ಮೊಬೈಲ್ ನಂಬರ್ ಆಯ್ಕೆಯಾಗಿದೆ ಎಂದು ಪತ್ರ ಕಳುಹಿಸಿ, ವಂಚಿಸಲಾಗಿದೆ.

ಶಿವಮೊಗ್ಗದ ವನಿತಾ (29) ಎಂಬವರನ್ನು ವಂಚಿಸಲಾಗಿದೆ. ದೆಹಲಿಯ ಆನ್‌ಲೈನ್ ಶಾಪಿಂಗ್ ಕಂಪೆನಿಯೊಂದರ ಹೆಸರಿನಲ್ಲಿ ವನಿತಾ ಅವರಿಗೆ ಬಹುಮಾನ ಬಂದಿದೆ ಎಂದು ಪತ್ರ ಕಳುಹಿಸಲಾಗಿತ್ತು. 12.50 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿದ್ದೀರಿ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಇದನ್ನು ನಂಬಿದ ವನಿತಾ, ಪತ್ರದಲ್ಲಿ ಇದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದರು.

12.50 ಲಕ್ಷ ರೂ. ಬಹುಮಾನ ನೀಡಲು ಕೆಲವು ಚಾರ್ಜಸ್ ಗಳಿವೆ, ಎನ್‌ಒಸಿ ಬೇಕಿದೆ ಎಂದು ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿದ ವನಿತಾ, ಹಂತ ಹಂತವಾಗಿ ಮೂರು ಲಕ್ಷ ರೂ. ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆಯೇ, ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News