ಮಾ.20ರಿಂದ ರಾಜ್ಯದ 3 ಕಡೆಗಳಲ್ಲಿ 'ಮಹಾಪಂಚಾಯತ್': ರಾಕೇಶ್ ಟಿಕಾಯತ್ ಸೇರಿ ಹಲವು ರೈತ ನಾಯಕರು ಭಾಗಿ

Update: 2021-03-15 17:02 GMT
ಸಾಂದರ್ಭಿಕ ಚಿತ್ರ

ಮೈಸೂರು,ಮಾ.15: ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ದೇಶಾದ್ಯಂತ ನಡೆಯುತ್ತಿರುವ ಮಹಾಪಂಚಾಯತ್ ಸಭೆಗಳು ಕರ್ನಾಟಕಕ್ಕೂ ಕಾಲಿಟ್ಟಿವೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಯನ್ನು ಬೆಂಬಲಿಸಿ ರಾಜ್ಯದಲ್ಲಿಯೂ ರೈತ ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ 'ಮಹಾಪಂಚಾಯತ್'ಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ರೂಪಿಸಿರುವ 'ಮಹಾಪಂಚಾಯತ್' ಮೊದಲ ಸಭೆ ಮಾ.20ರಂದು ಶಿವಮೊಗ್ಗದಲ್ಲಿ ನಡೆದರೆ, ಮಾ.21ರಂದು ಹಾವೇರಿ ಮತ್ತು ಮಾ.31ರಂದು ಬೆಳಗಾವಿಯಲ್ಲಿ ಮಹಾಪಂಚಾಯತ್ ನಡೆಯಲಿದೆ ಎಂದರು.

ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರ ನಾಯಕರಾದ ರಾಕೇಶ್ ಟಿಕಾಯತ್, ಯದ್ಧವೀರ್ ಸಿಂಗ್, ಡಾ.ದರ್ಶನ್ ಪಾಲ್ ಮಹಾಪಂಚಾಯತ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ರೈತಪರ ಸಂಘಟನೆಗಳು ಚರ್ಚಿಸಿ ಎಲ್ಲರನ್ನೂ ಒಗ್ಗೂಡಿಸಿ ಒಂದೇ ವೇದಿಕೆಯಲ್ಲಿ ಒಗ್ಗಟ್ಟಾಗಿ ಹೋರಾಟವನ್ನು ಮಾಡಲಾಗುತ್ತಿದೆ. ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ, ಐಕ್ಯ ಹೋರಾಟ ಕರ್ನಾಟಕ, ಸಂಯುಕ್ತ ಹೋರಾಟ ಕರ್ನಾಟಕ, ಅಖಂಡ ಕರ್ನಾಟಕ ರೈತ ಸಂಘ ಹಾಗೂ ದಲಿತ, ಕಾರ್ಮಿಕ ಮತ್ತು ರೈತ ಪರ ಸಂಘಟನೆಗಳು ಒಟ್ಟುಗೂಡಿ ಈ ಮಹಾಪಂಚಾಯತ್ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ವಿದ್ಯಾಸಾಗರ, ಮಂಜುಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಹಾಪಂಚಾಯತ್ ನಡೆಸಿಯೇ ತೀರುತ್ತೇವೆ: ಚುಕ್ಕಿ ನಂಜುಂಡಸ್ವಾಮಿ
ರಾಜ್ಯ ಸರ್ಕಾರ ಅನುಮತಿ ನೀಡಲಿ ಬಿಡಲಿ ಮಹಾಪಂಚಾಯತ್ ನಡೆಸಿಯೇ ತೀರುತ್ತೇವೆ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.

(ಚುಕ್ಕಿ ನಂಜುಂಡಸ್ವಾಮಿ)

ಈಗಾಗಲೇ ಮಹಾಪಂಚಾಯತ್ ಸಮಾವೇಶಕ್ಕೆ ದಿನಾಂಕ ಮತ್ತು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಅಂದು ಸಾವಿರಾರು ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೋವಿಡ್ ನೆಪ ಹೇಳಿ ತಡೆಯಲು ರಾಜ್ಯ ಸರ್ಕಾರ ಮುಂದಾದರೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ನಡೆಯುವ ಮಹಾಪಂಚಾತ್‍ಗಳಿಗೆ ಈಗಾಗಲೇ ಅವಕಾಶ ದೊರೆತಿದೆ. ಆದರೆ, ಬೆಳಗಾವಿಯಲ್ಲಿ ನಡೆಯುವ ಸಭೆಗೆ ಅವಕಾಶ ನೀಡಿಲ್ಲ. ಆದರೂ ಕೂಡ ನಾವು ಮಹಾಪಂಚಾಯತ್ ನಡೆಸುತ್ತೇವೆ. ಹೊಸದಿಲ್ಲಿ ರೈತ ಹೋರಾಟದಲ್ಲಿ 230ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅವರು ಯಾರೂ ಕೋವಿಡ್‍ನಿಂದ ನಿಧನರಾಗಿಲ್ಲ. ಮಹಾಪಂಚಾಯತ್‍ಗಳು ದೇಶದಲ್ಲಿ ಹೆಚ್ಚಿದಂತೆಲ್ಲ ಕೇಂದ್ರ ಸರ್ಕಾರದ ಸುಳ್ಳಿನ ಮುಖವಾಡ ಕಳಚಿ ಬೀಳುತ್ತಿದೆ ಎಂದರು.

ದೇಶದ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಸರ್ಕಾರದ ನೀಚ ವರ್ತನೆಗೆ ಮಹಾಪಂಚಾಯತ್‍ಗಳು ಸೂಕ್ತ ಉತ್ತರ ನೀಡುತ್ತಿದೆ. ಹೀಗಾಗಿ ಇವುಗಳನ್ನು ತಡೆಯಲು ಸರ್ಕಾರ ಯತ್ನಿಸುತ್ತಿದೆ ಎಂದರು. ಒಂದು ವೇಳೆ ಕೋವಿಡ್ ನೆಪ ಹೇಳಿ ರೈತ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದರೆ, ಕುಂಭ ಮೇಳ ಮತ್ತು ವಿವಿಧ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಸಮಾವೇಶಗಳನ್ನು ರದ್ದುಗೊಳಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ ನಾಲ್ಕು ತಿಂಗಳಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಪ್ರಾಣವನ್ನು ಲೆಕ್ಕಸದೇ ಚಳವಳಿಯಲ್ಲಿ ತೊಡಗಿದ್ದಾರೆ. ಆದರೆ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯವರೆಗೂ ರೈತರೊಂದಿಗೆ ಮಾತುಕತೆ ನಡೆಸಿಲ್ಲ. ಅಂಬಾನಿ ಮಗಳ ಮದುವೆ ಹೋಗುತ್ತಾರೆ, ಅನುಷ್ಕಾ ಶರ್ಮಗೆ ಮಗು ಹುಟ್ಟಿದರೆ ಶುಭ ಕೋರುತ್ತಾರೆ. ಆದರೆ, ರೈತರೊಂದಿಗೆ ಮಾತುಕತೆ ನಡೆಸಲು ಅವಮಾನವೇ ಎಂದು ಪ್ರಶ್ನಿಸಿದ ಅವರು, ಕಿಂಚಿತ್ತೂ ಮಾನವೀಯ ಸ್ಪಂದನೆ ನೀಡಿದಿರುವ ಪ್ರಧಾನಿಯ ಧೋರಣೆಯನ್ನು ಜನರಿಗೆ ತಿಳಿಸಬೇಕು ಎಂದರು.

ಮಾ.26ರಂದು 'ಭಾರತ್ ಬಂದ್' ಕರೆ: ಕಳೆದ ನ.26ರ ಸಂವಿಧಾನ ದಿನದಂದು ಆರಂಭಗೊಂಡ ರೈತ ಚಳವಳಿಯು ಮಾ.26ಕ್ಕೆ ನಾಲ್ಕು ತಿಂಗಳು ಪೂರ್ಣಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಹೋರಾಟದ ತೀವ್ರತೆಗಾಗಿ ಮಾ.26 ಭಾರತ್ ಬಂದ್‍ಗೆ ಕರೆ ನೀಡಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News