×
Ad

ಡೆಲಿವರಿ ಬಾಯ್ ಕಾಮರಾಜು ಬೆಂಬಲಕ್ಕೆ ನಿಂತ ಸೆಲೆಬ್ರಿಟಿಗಳು: 'ಝೊಮ್ಯಾಟೊದಿಂದ ಯಾವುದೇ ಆರ್ಡರ್​ ಪಡೆಯಲ್ಲ' ಎಂದ ಕೆಫೆ

Update: 2021-03-15 22:26 IST

ಬೆಂಗಳೂರು, ಮಾ.15: ಇತ್ತೀಚಿಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಝೊಮಾಟೋ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದರೆನ್ನಲಾದ ಘಟನೆ ಬಗ್ಗೆ ಎಲ್ಲೆಡೆ ಪರ, ವಿರೋಧ ಚರ್ಚೆ ನಡೆಯುತ್ತಿದ್ದು, ಘಟನೆ ಬಗ್ಗೆ ಡೆಲಿವರಿ ಬಾಯ್ ಕಾಮರಾಜು ಸ್ಪಷ್ಟನೆ ನೀಡಿದ ಮೇಲೆ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಸೇರಿ ಸಾವಿರಾರು ಮಂದಿ ಕಾಮರಾಜು ಪರವಾಗಿ ಧ್ವನಿಯೆತ್ತಿದ್ದಾರೆ.

ಡೆಲಿವರಿ ಬಾಯ್ ನಿಂದ ತಾನು ಹಲ್ಲೆಗೊಳಗಾಗಿದ್ದೇನೆಂದು ಆರೋಪಿಸಿ ಬೆಂಗಳೂರಿನ ಮಹಿಳೆ ಹಿತೇಶಾ ಚಂದ್ರಾನಿ ಎಂಬವರು ಇನ್‍ಸ್ಟಾಗ್ರಾಂ ವೀಡಿಯೋವೊಂದನ್ನು ಪೋಸ್ಟ್ ಮಾಡಿದ ನಂತರ ಝೊಮ್ಯಾಟೋ ತನ್ನ ಉದ್ಯೋಗಿಯನ್ನು ವಜಾಗೊಳಿಸಿತ್ತು. ಆದರೆ ಸೇವೆಯಿಂದ ವಜಾಗೊಂಡ ಫುಡ್ ಡೆಲಿವರಿ ಬಾಯ್ ಕಾಮರಾಜು‍ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಮಹಿಳೆಯ ವೈರಲ್ ಆಗಿರುವ ವೀಡಿಯೋದಲ್ಲಿ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಲ್ಲದೆ ತನ್ನನ್ನು ಮಹಿಳೆಯೇ ಮೊದಲು ನಿಂದಿಸಿದ್ದು ನಂತರ ಚಪ್ಪಲಿಯಿಂದ ಹೊಡೆದಿದ್ದರು ಎಂದು ಸ್ಪಷ್ಟನೆ ನೀಡಿದ್ದರು.

''ಆಹಾರ ವಾಪಸ್ ನೀಡಲು ಯುವತಿ ಹಿಂದೇಟು ಹಾಕಿದರು. ಜೊತೆಗೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಮೇಲೆ ಚಪ್ಪಲಿ ಎಸೆದರು. ನನಗೆ ಹೊಡೆಯುವ ರಭಸದಲ್ಲಿ ಯುವತಿಯ ಕೈಯಲ್ಲಿದ್ದ ಉಂಗುರದಿಂದ ಆಕೆ ತನ್ನ ಮೂಗಿಗೆ ಹೊಡೆದುಕೊಂಡಿದ್ದಾರೆ' ಎಂದು ಕಾಮರಾಜು ಸ್ಪಷ್ಟನೆ ನೀಡಿದ್ದರು. ಅವರು ಅಳುತ್ತಾ ಮಾತನಾಡುವ ವಿಡಿಯೋ ಕೂಡಾ ವೈರಲ್ ಆಗಿತ್ತು.

ಕಾಮರಾಜು ಸ್ಪಷ್ಟನೆ ನೀಡಿದ ಮೇಲೆ, ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಝೊಮಾಟೋ ಮತ್ತು ಕಾಮರಾಜು ಟ್ರೆಂಡಿಂಗ್ ಆಗುತ್ತಿದ್ದು, ಸೆಲೆಬ್ರಿಟಿಗಳು ಕೂಡ ಕಾಮರಾಜು ಪರವಾಗಿ ಧ್ವನಿಯೆತ್ತಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ನಟಿ ಪರಿಣಿತಿ ಚೋಪ್ರಾ, 'ಝೊಮ್ಯಾಟೊ ಇಂಡಿಯಾ. ದಯವಿಟ್ಟು ನಿಜಾಂಶ ಹುಡುಕಿ ಸಾರ್ವಜನಿಕವಾಗಿ ವರದಿ ಮಾಡಿ. ಈ ಜೆಂಟಲ್ ಮ್ಯಾನ್ ತಪ್ಪಿತಸ್ಥನಲ್ಲ ಎನಿಸುತ್ತಿದೆ. ಮುಗ್ದನಾಗಿದ್ದರೆ ಯುವತಿಗೆ ಶಿಕ್ಷೆ ಆಗುವಂತೆ ಸಹಕರಿಸಿ. ಇದು ಅವಮಾನವೀಯ, ನಾಚಿಕೆಗೇಡು ಮತ್ತು ಹೃದಯ ವಿದ್ರಾವಕ ಘಟನೆ. ಈ ಬಗ್ಗೆ ನಾನು ಹೇಗೆ ಸಹಾಯ ಮಾಡಬಹುದು ಎಂದು ತಿಳಿಸಿ'' ಎಂದಿದ್ದಾರೆ.

ನಟಿ ಪ್ರಣೀತಾ ಸುಭಾಷ್, 'ಆಹಾರ ವಿತರಣೆ ಸಮಯಕ್ಕೆ ಅನುಗುಣವಾಗಿರುತ್ತದೆ. ಆದರೆ ನ್ಯಾಯ? ಡೆಲಿವರಿ ಮ್ಯಾನ್ ಆಡಿರುವ ಮಾತು ನಿಜವಾಗಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯ ಬೇಗ ಸಿಗಲಿದೆ ಎಂಬ ನಂಬಿಕೆ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಬಗ್ಗೆ ನಟಿ ಸಂಯುಕ್ತಾ ಹೆಗ್ಡೆ ಟ್ವೀಟ್ ಮಾಡಿ, ಉಂಗುರ ಮತ್ತು ಅವಳ ಮೂಗಿನ ಕಟ್ ನೋಡಿ (ಉಂಗುರದ ಮೇಲೆ ಗೋಚರಿಸುವ ರಕ್ತದ ಕಲೆ). ಅವಳು ಹೇಳಿಕೊಂಡದ್ದು ನಿಜವಾಗಿದ್ದರೆ, ಅವನು ಅವಳನ್ನು ಹೊಡೆದಿದ್ದರೆ ಅವಳ ಮೂಗು ಮುರಿಯುತ್ತಿತ್ತು.

ಝೊಮ್ಯಾಟೊ, ಅಸಮಾಧಾನಗೊಂಡಿದ್ದೇನೆ. ಕಾಮರಾಜು ಅವರ ಕೆಲಸವನ್ನು ಮರಳಿ ನೀಡಿ ಮತ್ತು ಮಾಡಿದ ಎಲ್ಲಾ ಹಾನಿಗಳಿಗೆ ಪರಿಹಾರವನ್ನು ನೀಡಿ #JusticeForKamaraj ಎಂದು ತಿಳಿಸಿದ್ದಾರೆ.

ಈ ಬಗ್ಗೆ 'ಜಾನಿ ವಾಕರ್​ ದಿ ಕೆಫೆ' ರೆಸ್ಟೋರೆಂಟ್ ಕೂಡಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಕಾಮರಾಜು ಅವರನ್ನು ಬೆಂಬಲಿಸಿದ್ದು, 'ನಾವು ಕಾಮರಾಜು​ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಕಾಮರಾಜು ಅವರನ್ನು ಝೊಮ್ಯಾಟೊ ಕೆಲಸಕ್ಕೆ ನೇಮಕ ಮಾಡಿಕೊಳ್ಳುವವರೆಗೂ ಝೊಮ್ಯಾಟೊದಿಂದ ನಾವು ಯಾವುದೇ ಆರ್ಡರ್​ ಪಡೆಯುವುದಿಲ್ಲ. ಕಾಮರಾಜು ಅವರಿಗೆ ಆದ ಅನ್ಯಾಯ ಒಂದು ಉದಾಹರಣೆಯಷ್ಟೇ. ಇಂತಹ ಸಾವಿರಾರು ಘಟನೆಗಳು ನಡೆಯುತ್ತಿರುತ್ತವೆ. ಡೆಲಿವರಿ ಬಾಯ್​ಗಳು ಅವರ ಜೀವನಕ್ಕಾಗಿಯೇ ಕಷ್ಟಪಡುತ್ತಿರುತ್ತಾರೆ. ಅವರ ಬಗ್ಗೆ ಗೌರವ ಇರಬೇಕು. ಕಾಮರಾಜು ಅವರ ಊಟವನ್ನು ಯಾರೇ ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ. ಸತ್ಯ ಆದಷ್ಟು ಬೇಗ ಹೊರಬರುತ್ತದೆ. ಕಾಮರಾಜುವಿಗೆ ಖಂಡಿತ ನ್ಯಾಯ ಸಿಗುತ್ತದೆ ಎಂದು ತಿಳಿಸಿದೆ.

ಅಲ್ಲದೇ, ಕಾಮರಾಜು ಅವರನ್ನು ಬೆಂಬಲಿಸಿ ಸಾವಿರಾರು ಮಂದಿ ಟ್ವೀಟ್, ಫೇಸ್ಬುಕ್ ಪೋಸ್ಟ್ ಮಾಡಿದ್ದು, We Stand with kamaraj, #JusticeForKamaraj ಹ್ಯಾಷ್​ಟ್ಯಾಗ್​ಗಳ ಟ್ರೆಂಡ್ ಆಗುತ್ತಿವೆ. ಕಾಮರಾಜು ಅವರ ಫೋಟೋಗಳು ಕೂಡ ವೈರಲ್​ ಆಗುತ್ತಿವೆ. 'ದಯವಿಟ್ಟು ಕಾಮರಾಜು ಅವರಿಗೆ ನ್ಯಾಯ ಕೊಡಿ ಕೆಲಸ ವಾಪಸ್​ ಕೊಡಿ', 'ಸುಳ್ಳು ಹೇಳಿ ಒಬ್ಬ ವ್ಯಕ್ತಿಯ ಜೀವನದ ಜತೆ ಚೆಲ್ಲಾಟ ಆಡುತ್ತಿರುವ ಮಹಿಳೆಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News