×
Ad

ವೃದ್ಧಾಪ್ಯ ವೇತನ ನೀಡಲು ಸರಕಾರದ ಬಳಿ ಹಣವಿಲ್ಲದ ದುಸ್ಥಿತಿ ನಿರ್ಮಾಣವಾಗಲಿದೆ: ಸಿದ್ದರಾಮಯ್ಯ ಎಚ್ಚರಿಕೆ

Update: 2021-03-15 23:39 IST

ಬೆಂಗಳೂರು, ಮಾ. 15: ‘ಮಿತಿ ಮೀರಿದ ಸಾಲ ಪಡೆಯುವುದರಿಂದ ಅಭಿವೃದ್ಧಿ, ಆಸ್ತಿ ನಿರ್ಮಾಣ ಕಾರ್ಯಗಳಿಗೆ ರಾಜ್ಯ ಸರಕಾರದ ಬಳಿಕ ಹಣವೇ ಇರುವುದಿಲ್ಲ. ಕೇವಲ 10 ಸಾವಿರ ಕೋಟಿ ರೂ.ಗಳನ್ನು ಇಟ್ಟುಕೊಂಡು ವಿಧವಾ, ವೃದ್ಧಾಪ್ಯ ವೇತನ ನೀಡಲು ಸರಕಾರದ ಬಳಿ ಹಣವಿಲ್ಲದ ದುಸ್ಥಿತಿ ನಿರ್ಮಾಣವಾಗಲಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ 2021-22ನೆ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಾಲಿನಲ್ಲಿ 73ಸಾವಿರ ಕೋಟಿ ರೂ.ಸಾಲ ಪಡೆಯಲು ಪ್ರಸ್ತಾಪಿಸಲಾಗಿದೆ. ಸಾಲ ದೊರೆಯುತ್ತದೆ ಎಂದು ಸಾಲ ಪಡೆಯಬಾರದು. ಸಾಲ ತೀರಿಸಲು ಸಾಮರ್ಥ್ಯವಿದ್ದರೆ ಮಾತ್ರ ಸಾಲವನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಯಡಿಯೂರಪ್ಪನವರು ಮಂಡಿಸಿರುವ ಬಜೆಟ್ ವಿತ್ತೀಯ ನಿಯಮಗಳಿಗೂ ವಿರುದ್ಧವಾಗಿದ್ದು, 2020-21ರ ಬಜೆಟ್‍ನಲ್ಲಿ 19,485 ಕೋಟಿ ರೂ.ವಿತ್ತೀಯ ಕೊರತೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 15,133 ಕೋಟಿ ರೂ.ಕೊರತೆಯಾಗುವ ಅಂದಾಜಿದೆ. ಈ ಕೊರತೆ ನೀಗಿಸಲು ಸಾಲ ಮಾಡುವುದಾಗಿ ಸರಕಾರ ಹೇಳಿದೆ. ಇದು ಹೀಗೇ ಮುಂದುವರಿದರೆ ಸಾಲದ ಪ್ರಮಾಣವು ಶೇ.26.09ರಷ್ಟಾಗಲಿದೆ. ಆ ಸ್ಥಿತಿಯಿಂದ ಸರಕಾರ ಆದಾಯ ಹೆಚ್ಚಳದ ಸ್ಥಿತಿಗೆ ಬಂದು ತಲುಪಲು ಸಾಧ್ಯವೇ ಇಲ್ಲ ಎಂದು ಅವರು ಅಂಕಿ-ಅಂಶಗಳನ್ನು ನೀಡಿದರು.

ಸರಕಾರ ನಡೆಸಲು ನೀವು ಸಮರ್ಥರೇ?: ಜಿಎಸ್ಪಿ ಪರಿಹಾರ ಸೇರಿದಂತೆ ಕೇಂದ್ರದಿಂದ ಯಾವುದೇ ವಿಶೇಷ ಅನುದಾನಗಳನ್ನ ತಂದಿಲ್ಲ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯ ಸ್ವರ್ಗವಾಗಲಿದೆ ಎಂದು ಹೇಳಿದ್ದೀರಿ. ಪ್ರಧಾನಿ, ಹಣಕಾಸು ಸಚಿವರನ್ನ ಭೇಟಿ ಮಾಡಿ ರಾಜ್ಯದ ಪಾಲಿನ ಅನುದಾನವನ್ನು ಏಕೆ ಪಡೆಯುತ್ತಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಮ್ಮ ಹಕ್ಕು ಕೇಳಲೂ ಅಸಮರ್ಥರಾದರೆ ನೀವು ಸರಕಾರವನ್ನು ನಡೆಸಲು ಸಮರ್ಥರೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖೋತಾ ಬಜೆಟ್: ರಾಜ್ಯ ಇತಿಹಾಸದಲ್ಲಿಯೇ ಇಂತಹ ಅಭಿವೃದ್ದಿ ವಿರೋಧಿ ಬಜೆಟ್ ಅನ್ನು ಎಂದೂ ಮಂಡಿಸಿರಲಿಲ್ಲ. ವಿತ್ತೀಯನಿಯಮಗಳನ್ನ ಗಾಳಿಗೆ ತೂರಿ ಇದೇ ಮೊದಲ ಬಾರಿಗೆ ಖೋತಾ ಬಜೆಟ್ ಮಂಡನೆ ಮಾಡಲಾಗಿದೆ. ಆರ್ಥಿಕ ತಜ್ಞರು ಸೇರಿ ಯಾರೂ ಕೂಡ ಇದನ್ನ ಒಳ್ಳೆಯ ಬಜೆಟ್ ಎಂದು ಹೇಳಲು ಸಾಧ್ಯವೇ ಇಲ್ಲ? ಎಂದು ಸಿದ್ದರಾಮಯ್ಯ ಟೀಕಿಸಿದರು.

ನೀವು ಈ ಸ್ಥಾನದಲ್ಲಿದ್ದರೆ ಏನು ಮಾಡ್ತಿದ್ದೀರಿ: ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಕೊರೋನ ಸಂಕಷ್ಟ, ಸಂಪನ್ಮೂಲ ಕೊರತೆಯ ಸಂದರ್ಭದಲ್ಲಿ ನನ್ನ ಸ್ಥಾನದಲ್ಲಿ ನೀವು ಇದ್ದಿದ್ದಿದ್ದರೆ ಏನು ಮಾಡುತ್ತಿದ್ದೀರಿ? ಎಂದು ಕೆಣಕಿದರು. ಇದಕ್ಕೆ ಏರಿದ ಧ್ವನಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ನಾನು ನಿಮ್ಮ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದೆ ಎಂದು ಮಾಡಿ ತೋರಿಸುತ್ತಿದ್ದೆ' ಎಂದರು.

ನಾವು ಪುನಃ ಅಧಿಕಾರಕ್ಕೆ ಬರುತ್ತೇವೆ: ‘ಈಗಲೂ ನಾನು ಹೇಳುತ್ತಿದ್ದೇನೆ. ನೀವು ನನಗೆ ಅವಕಾಶ ನೀಡಿ ನನಗೆ ಆ ಸೀಟು ಬಿಟ್ಟುಕೊಡಿ, ಅಲ್ಲಿದ್ದು ನಾನು ಹೇಳುತ್ತೇನೆ. 1947ರಿಂದಲೂ ಒಬ್ಬರೇ ಆ ಕುರ್ಚಿಗೆ ಅಂಟಿ ಕೂತಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಜನರು ಮುಂದಿನ ಬಾರಿ ನಮಗೆ ಅಧಿಕಾರ ಕೊಡುತ್ತಾರೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ನಾವು ನಿಮ್ಮ ಕುರ್ಚಿಯಲ್ಲಿ ಬಂದು ಕೂರುವ ದಿನಗಳು ದೂರ ಇಲ್ಲ' ಎಂದು ಸಿದ್ದರಾಮಯ್ಯ ವಾಗ್ಬಾಣ ಬಿಟ್ಟರು.

ರಾಜ್ಯ ಸರಾರ ಕೊರೋನ ನಿಯಂತ್ರಣಕ್ಕೆ ಕೇವಲ 5,300 ಕೋಟಿ ರೂ.ಗಳಷ್ಟು ವೆಚ್ಚ ಮಾಡಿದೆ ಎಂದು ಹೇಳುತ್ತದೆ. ಆದರೆ, ಅಷ್ಟು ಮೊತ್ತವನ್ನೂ ವೆಚ್ಚ ಮಾಡಿಲ್ಲ. ಎಲ್ಲದಕ್ಕೂ ಅದರ ನೆಪ ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಸಿದ್ದರಾಮಯ್ಯ, ಈ ಬಾರಿ ಬಜೆಟ್ ವೆಚ್ಚ ಅಧಿಕವಾಗಿದೆ. ವೆಚ್ಚ ಅಧಿಕವಾದರೆ ಆರ್ಥಿಕ ಹೊರೆಯೂ ಹೆಚ್ಚುತ್ತದೆ ಎಂದರು.

ಸರಕಾರ ಭರವಸೆ ನೀಡಿದಂತೆ ಚಾಲಕರು, ಮಡಿವಾಳರು, ಬೀದಿ ವ್ಯಾಪಾರಿಗಳು ಸೇರಿ ಯಾರಿಗೂ ಕೋವಿಡ್ ಪರಿಹಾರ ಮೊತ್ತ ನೀಡಿಲ್ಲ. ರಾಜ್ಯದಲ್ಲಿನ 1 ಕೋಟಿ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂ.ನಂತೆ ಕೊರೋನ ಪರಿಹಾರ ನೀಡಿ, ಅವರಿಗೆ ಕೊಳ್ಳುವ ಶಕ್ತಿ ಬಂದರೆ ಜಿಡಿಪಿ ವೃದ್ಧಿಯಾಗುತ್ತದೆಂಬ ನನ್ನ ಸಲಹೆಯನ್ನು ಸರಕಾರ ಸ್ವೀಕರಿಸಲಿಲ್ಲ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯಿಂದ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸರಕಾರ ಸೋಂಕು ನಿಯಂತ್ರಣ ದೃಷ್ಟಿಯಿಂದ ಕೆಲ ಕಟ್ಟುನಿಟ್ಟಿನ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತೊಮ್ಮೆ ಲಾಕ್‍ಡೌನ್ ಸ್ಥಿತಿ ನಿರ್ಮಾಣವಾದರೆ ಪರಿಸ್ಥಿತಿ ಕಷ್ಟ. ಹೀಗಾಗಿ ಸರಕಾರ ಹೊರಗಿನಿಂದ ಬರುವವರ ಮೇಲೆ ನಿಗಾ ವಹಿಸಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News