ರಾಮನ ಕುರಿತು ಮಾತನಾಡಿದರೆ ಮಸಿ ಬಳಿಯುವುದೇ: ಬಿ.ಕೆ.ಹರಿಪ್ರಸಾದ್ ಪ್ರಶ್ನೆ
ಬೆಂಗಳೂರು, ಮಾ.15: ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯ ನಾಟಕ ಪ್ರದರ್ಶನಕ್ಕೆ ಬಜೆಟ್‍ನಲ್ಲಿ 1 ಕೋಟಿ ರೂ. ಮೀಸಲಿಟ್ಟಿರುವುದನ್ನು ತಾವು ತಪ್ಪು ಎಂದು ಹೇಳುವುದಿಲ್ಲ. ಆದರೆ, ರಾಮನ ಕುರಿತು ಮಾತನಾಡಿದರು ಎಂಬ ಮಾತ್ರಕ್ಕೆ ಪ್ರೊ.ಕೆ.ಎಸ್.ಭಗವಾನ್ ಸೇರಿ ಇತರರ ಮುಖಕ್ಕೆ ಮಸಿ ಬಳಿದಿದ್ದಕ್ಕೆ ನಮ್ಮ ವಿರೋಧವಿದೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸೋಮವಾರ ವಿಧಾನ ಪರಿಷತ್‍ನಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಆಡಳಿತ ಪಕ್ಷದ ಹಿರಿಯ ಸದಸ್ಯರಾದ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ, ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರನಿಗೆ ಏಕೆ ಮೀಸಲಾತಿ ನೀಡಬೇಕು. ಕೆನೆಪದರ ಜಾರಿಯಾಗಲಿ ಎಂದು ಹೇಳಿದ್ದಾರೆ.
ಆದರೆ, ಖರ್ಗೆ ಅವರ ಪುತ್ರ ಈಗ ಹಾಲಿ ಶಾಸಕರಿದ್ದಾರೆ. ಸಿಎಂ ಆದರೂ ಕೆಲವು ದೇವಸ್ಥಾನಗಳು ಅವರನ್ನು ಒಳಗಡೆ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿಯೇ, ಕೆನೆಪದರ ಜಾರಿ ಆಗುವುದಕ್ಕಿಂತ ಮೀಸಲಾತಿ ಮುಂದುವರಿಯಲಿ ಹಾಗೂ ಮೇಲು ಜಾತಿಗಳಿಗೆ ಮೀಸಲಾತಿ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ರವಿಕುಮಾರ್ ಅವರು, ಯಾವ ದೇವಸ್ಥಾನಗಳಲ್ಲಿ ಎಸ್ಸಿ ಜನಾಂಗದ ಜನಪ್ರತಿನಿಧಿಗಳನ್ನು ಒಳಗಡೆ ಬಿಟ್ಟುಕೊಳ್ಳುತ್ತಿಲ್ಲ ಎಂಬುದನ್ನು ಹೇಳಬೇಕು ಎಂದು ಒತ್ತಾಯಿಸಿದರು.
ಮಾತು ಮುಂದುವರೆಸಿ ಮಾತನಾಡಿದ ಹರಿಪ್ರಸಾದ್ ಅವರು, ಮಲ್ಲಿಕಾರ್ಜುನ್ ಖರ್ಗೆ ಪುತ್ರ ಅಷ್ಟೇ ಅಲ್ಲ, ಪುರಿ ಜಗನ್ನಾಥ್ ದೇವಸ್ಥಾನದ ಒಳಗಡೆ ರಾಷ್ಟ್ರಪತಿ ಅವರನ್ನೇ ಒಳಪ್ರವೇಶಿಸಲು ಅವಕಾಶ ನೀಡಲಿಲ್ಲ. ಬಿಹಾರದಲ್ಲಿ ಆರೆಸ್ಸೆಸ್ಸ್ ಮುಖಂಡರು ಮೀಸಲಾತಿ ತೆಗೆದು ಹಾಕುತ್ತೇವೆ ಎಂದಾಗ ಬಿಹಾರಿಗರು ಬಿಜೆಪಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದರು. ಅದು ನಿಮಗೆ ನೆನಪು ಇಲ್ಲವೆ ಎಂದು ಪ್ರಶ್ನಿಸಿದರು.
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಈ ನಾಡಿನಲ್ಲಿ ಪಾಟೀಲ್ ಪುಟ್ಟಪ್ಪ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು ಬರೆದ ಕಾದಂಬರಿ ಕುರಿತು ನಾಟಕವನ್ನು ಏಕೆ ಮಾಡಲಿಲ್ಲ. ಪರ್ವವನ್ನೇ ಏಕೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿ 1 ಕೋಟಿ ಬಿಡುಗಡೆ ಮಾಡುತ್ತಿದ್ದೀರಿ. ಇದು ತಾರತಮ್ಯವಲ್ಲವೇ ಎಂದು ಪ್ರಶ್ನಿಸಿದರು.
ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ, ಈ ಬಜೆಟ್ ರೈತ, ಕಾರ್ಮಿಕ, ಬಡವರ ವಿರೋಧಿಯಾಗಿದೆ ಎಂದು ತಿಳಿಸಿದರು.
ಮೀಸಲಾತಿ ಹಿಂದೆ ಆರೆಸ್ಸೆಸ್ಸ್ ಕೈವಾಡವಿದೆ
‘ಮೀಸಲಾತಿ ಹೋರಾಟದ ಹಿಂದೆ ಸಂಘಪರಿವಾರದ ಕೈವಾಡವಿದೆ. ಮೀಸಲಾತಿಯನ್ನು ರದ್ದು ಮಾಡುವ ಉದ್ದೇಶದಿಂದ ಎಲ್ಲ ಸಮುದಾಯಗಳಿಗೂ ಮೀಸಲಾತಿ ಬೇಕು ಎನ್ನುವ ಆಗ್ರಹವನ್ನು ಮುಂದಿಟ್ಟಿದೆ.’
-ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ