ಮೀನುಗಾರಿಕೆ: 3,313 ಕಿಮೀ ವ್ಯಾಪ್ತಿಗೆ ಸೀಮೆಎಣ್ಣೆ ಒದಗಿಸಲು ಕೇಂದ್ರಕ್ಕೆ ಪತ್ರ- ಸಚಿವ ಎಸ್.ಅಂಗಾರ

Update: 2021-03-15 18:29 GMT

ಬೆಂಗಳೂರು, ಮಾ.15: ರಾಜ್ಯದ ಮೀನುಗಾರರಿಗೆ 3,313 ಕಿಮೀ ಸೀಮೆಎಣ್ಣೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಸೋಮವಾರ ಪರಿಷತ್‍ನ ಮಧ್ಯಾಹ್ನದ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಕೆ.ಹರೀಶ್‍ಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಇನ್ನೂ 3,313 ಕಿಮೀ ಸೀಮೆಎಣ್ಣೆ ಬರುವುದು ಬಾಕಿಯಿದೆ. ಇದನ್ನು ಶೀಘ್ರವಾಗಿ ತರಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಹಾಗೂ ಯಾಂತ್ರಿಕ ಮೀನುಗಾರಿಕೆಗೆ ಬಳಸುವ ಡೀಸೆಲ್ ಮೇಲಿನ ರಾಜ್ಯ ಮಾರಾಟ ಕರವನ್ನು ಸಂಪೂರ್ಣವಾಗಿ ವಿನಾಯಿತಿಗೊಳಿಸಿ, ಡೆಲಿವರಿ ಪಾಯಿಂಟ್‍ಗಳಲ್ಲಿಯೇ ಪೂರೈಸಲಾಗುವುದೆಂದು ತಿಳಿಸಿದ್ದಾರೆ.

ಮಂಗಳೂರು ಮೀನುಗಾರಿಕೆ ದೋಣಿಗಳ ದಟ್ಟಣೆಯನ್ನು ಕಡಿಮೆ ಮಾಡಲು ಮಂಗಳೂರು ತಾಲೂಕಿನ ಮೀನುಗಾರಿಕಾ ಬಂದರಿನ 3ನೇ ಹಂತದ ಮೀನುಗಾರಿಕಾ ಬಂದರಿನ ವಿಸ್ತರಣೆ ಕಾಮಗಾರಿಗೆ ಕೇಂದ್ರ ಸರಕಾರದ ನೆರವಿನೊಂದಿಗೆ 57.60 ಕೋಟಿ ರೂ.ನಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಲು ಅಗತ್ಯವಾದ ಕ್ರಮಗಳನ್ನು ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರದ ನೆರವಿನೊಂದಿಗೆ ಕುಳಾಯಿಯಲ್ಲಿ 196.51 ಕೋಟಿ ರೂ.ವೆಚ್ಚದಲ್ಲಿ ಸರ್ವ ಋತು ಬಂದರನ್ನು ನಿರ್ಮಿಸಲಾಗುತ್ತಿದೆ. ಅದರ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಂಗಳೂರು ತೋಟ ಬೇಂಗ್ರೆಯಲ್ಲಿ 337 ಲಕ್ಷ ರೂ.ವೆಚ್ಚದಲ್ಲಿ ನಾಡ ದೋಣಿಗಳ ತಂದುಗಾಣ ನಿರ್ಮಾಣ ಕಾಮಗಾರಿಯನ್ನು ಆರ್‍ಐಡಿಎಫ್ ಯೋಜನೆಯಡಿ ನಿರ್ಮಾಣ ಮಾಡಲಾಗುವುದೆಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೈತೀಕೃತ ವಾಹನ ಖರೀದಿ, ಶಾಖನಿರೋಧಕ ವಾಹನ ಖರೀದಿ, ಆಳಸಮುದ್ರ ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ, ಸಾಂಪ್ರದಾಯಿಕ ದೋಣಿಗಳ ಖರೀದಿ ಬದಲಿಗೆ ಎಫ್‍ಆರ್‍ಪಿ ಬೋಟು ಖರೀದಿ ಸಹಾಯ, ಪಂಜರ ಮೀನು ಕೃಷಿಗೆ ಸಹಾಯ, ಹಿನ್ನೀರು ಪ್ರದೇಶಗಳಲ್ಲಿ ಬಯೋಫ್ಲಾಕ್ ಕೊಳಗಳ ನಿರ್ಮಾಣಕ್ಕೆ ಸಹಾಯ, ಮಂಜುಗಡ್ಡೆ ಸ್ಥಾವರಗಳ ನಿರ್ಮಾಣಕ್ಕೆ ಸಹಾಯ ಯೋಜನೆಗಳಿಗೆ ಮಂಜೂರಾತಿ ದೊರಕಿದ್ದು, 264.53ಲಕ್ಷ ವೆಚ್ಚ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಮೀನುಗಾರಿಕೆಯಿಂದ ವಾರ್ಷಿಕ 5 ಸಾವಿರ ಕೋಟಿ ರೂ.ವಿದೇಶಿ ವಿನಿಮಯವಾಗುತ್ತಿದೆ. ಆದರೆ, ಕಳೆದ ಐದು ವರ್ಷಗಳಲ್ಲಿ ಚೆಂಡಮಾರುತ, ಕೋವಿಡ್ ಹಾಗೂ ಬೆಲೆ ಏರಿಕೆಯಿಂದಾಗಿ ಮೀನುಗಾರರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಮೀನುಗಾರಿಕೆಗೆ 5 ಸಾವಿರದಿಂದ 10 ಸಾವಿರ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಈಗಾಗಲೇ ಪಡೆದಿರುವ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು. ಶೇ.4ರ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸುವುದು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು.

-ಕೆ.ಹರೀಶ್‍ಕುಮಾರ್, ಕಾಂಗ್ರೆಸ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News