ಬ್ರಾಹ್ಮಣ ಹೆಣ್ಣು ಮಕ್ಕಳು ಇತರೆ ಜಾತಿಯವರನ್ನು ವರಿಸುತ್ತಿರುವ ಬಗ್ಗೆ ಚಿಂತಿಸಬೇಕಾಗಿದೆ: ಪೇಜಾವರ ಶ್ರೀ

Update: 2021-03-16 16:01 GMT

ಶಿವಮೊಗ್ಗ,ಮಾ,16: ರಾಮಮಂದಿರ ನಿರ್ಮಾಣವಾದರೆ ಸಾಲದು ಅದರ ನಿರ್ವಹಣೆಯೂ ಸದಾ ಆಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕರೆ ನೀಡಿದರು.

ಅವರು ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಅಂಗವಾಗಿ ಲೋಕಲ್ಯಾಣಾರ್ಥವಾಗಿ ಕಳೆದ 3 ದಿನಗಳಿಂದ ನಡೆಯುತ್ತಿರುವ ಶ್ರೀ ಯಜುಃ ಸಂಹಿತಾಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಇಡೀ ಭಾರತೀಯರ ಹಾಗೂ ಹಿಂದೂಗಳ ಕನಸಾಗಿದೆ. ಎಲ್ಲರ ಭಕ್ತಿ ಮತ್ತು ಶಕ್ತಿಯಿಂದ ಶ್ರೀ ರಾಮಮಂದಿರ ನಿರ್ಮಾಣವಾಗುತ್ತಿದೆ. ಭಕ್ತರಿಂದ ಸಾಕಷ್ಟು ಹಣ ಕೂಡ ಸಂಗ್ರಹವಾಗಿದೆ. ಈ ಮಂದಿರ ಕೇವಲ 100, 200 ವರ್ಷ ಇರುವುದಲ್ಲ. ಅದು ಶತಮಾನಗಳ ಕಾಲ ವರ್ತಮಾನವಾಗಿಯೇ ಇರುತ್ತದೆ. ಹಾಗಾಗಿ ರಾಮಮಂದಿರ ಕೇವಲ ನಿರ್ಮಾಣವಾದರೆ ಸಾಲದು, ಅದರ ನಿರ್ವಹಣೆಯು ಕೂಡ ಅತ್ಯಂತ ಎಚ್ಚರಿಕೆಯಿಂದ ನಡೆಬೇಕಾಗಿದೆ ಎಂದರು.

ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವುದು ಇಂದಿನ ತುರ್ತಾಗಿದೆ. ಅದು ಮನೆಯಿಂದಲೇ ನಡೆಯಬೇಕು. ಕೌಟುಂಬಿಕ, ಕುಂದು ಕೊರತೆಗಳು ಕಾಡುವ ಕಾಲವಿದು. ಸಾಮಾಜಿಕವಾಗಿ ಪ್ರತೀ ಕುಟುಂಬವು ಬೆಳೆಯಬೇಕಾಗಿದೆ. ಮನೆ, ಮಕ್ಕಳು, ತಂದೆ-ತಾಯಿಗಳು, ಹಿರಿಯರು ಹೀಗೆ ಒಂದು ಒಟ್ಟು ಕುಟುಂಬದ ಮಾತೃ ಮಂಡಳಿಯ ರಚನೆಯಾಗಬೇಕಾಗಿದೆ ಎಂದರು.

ಬ್ರಾಹ್ಮಣ ಸಮಾಜದ ಮೇಲೂ ಕೂಡ ಸಾಕಷ್ಟು ಜವಾಬ್ದಾರಿಯಿದೆ. ಬ್ರಾಹ್ಮಣ ಹೆಣ್ಣು ಮಕ್ಕಳು ಇತರೆ ಜಾತಿಯವರನ್ನು ವರಿಸಲು ಮುಂದಾಗುತ್ತಿರುವುದರ ಬಗ್ಗೆ ಚಿಂತಿಸಬೇಕಾಗಿದೆ. ಹಾಗಾಗಿ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಕೂಡ ಬೇಕಾಗಿದೆ ಎಂದ ಅವರು, ಇದರ ಜೊತೆಗೆ ಮಕ್ಕಳಲ್ಲಿ ಸಂಸ್ಕೃತ ಭಾಷೆಯ ಅಭಿರುಚಿ ಬೆಳಸಬೇಕೆಂದು ಕರೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News