ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಮತ್ತೆ ಕಂಟೇನ್ಮೆಂಟ್ ಝೋನ್ ಗುರುತು
ಬೆಂಗಳೂರು, ಮಾ.16: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಮತ್ತೆ ಗಣನೀಯವಾಗಿ ಏರಿಕೆ ಕಂಡು ಬಂದಿರುವ ಹಿನ್ನೆಲೆ ಹಲವು ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್‍ಗಳೆಂದು ಗುರುತಿಸಲಾಗಿದೆ.
ಈ ಹಿಂದೆ ಪ್ರತಿ ದಿನ 200 ಪ್ರಕರಣಗಳಿಗೆ ಇಳಿಕೆಯಾಗಿದ್ದ ಕೋವಿಡ್, ಪುನಃ ಪ್ರತಿನಿತ್ಯ ನಗರ ವ್ಯಾಪ್ತಿಯಲ್ಲಿ 550ಕ್ಕಿಂತ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಹಾಗಾಗಿ, ಸಮುದಾಯ ಮಟ್ಟದಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿರುವ ಬಿಬಿಎಂಪಿ ಅಧಿಕಾರಿಗಳು, ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಿ ಹೆಚ್ಚುವರಿಯಾಗಿ ನಿಗಾವಹಿಸಿದ್ದಾರೆ.
ಕಂಟೇನ್ಮೆಂಟ್ ಝೋನ್: ಇಲ್ಲಿನ ಯಲಹಂಕದ ವಾರ್ಡಿನ ಇನ್ಸ್ ಫೈರ್ ಲೈವ್‍ಸ್ಯೂಟ್ ಅತಿಥಿ ಗೃಹದಲ್ಲಿ ಒಟ್ಟು 12 ಜನರಿಗೆ ಕೋವಿಡ್ ದೃಢಪಟ್ಟಿರುವ ಹಿನ್ನೆಲೆ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಬೊಮ್ಮನಹಳ್ಳಿ ವ್ಯಾಪ್ತಿಯ ಓಮ್ ಅಪೆರೆಲ್ ಕಾರ್ಖಾನೆಯ 13 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಮಾ.18ರವರೆಗೆ ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ.
ಅದೇ ರೀತಿ, ಮಹದೇವಪುರದ ಬಿ.ನಾರಾಯಣಪುರ ಸರಕಾರಿ ಶಾಲೆಯಲ್ಲಿ 9 ಜನರಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆ ಮಾ.19ರವರೆಗೂ ಹಾಗೂ ನವಗ್ರಹ ಅಪಾರ್ಟ್‍ಮೆಂಟ್‍ನಲ್ಲಿ 6 ಜನರಲ್ಲಿ ಸೋಂಕು ದೃಢಪಟ್ಟಿರುವ ಕಾರಣಕ್ಕೆ ಮಾ.22ರವರೆಗೂ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.
ದಕ್ಷಿಣ ವಲಯದ ವಾರ್ಡಿನ ಸರಕಾರಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ವಸತಿ ಗೃಹ, ಟಿ.ದಾಸರಹಳ್ಳಿಯ ನೃಪತುಂಗ ರಸ್ತೆಯನ್ನು ಮಾ.29ರವರೆಗೆ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಿದ್ದು, ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬಿಬಿಎಂಪಿ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.