ಜುಲೈನಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭ: ಸಚಿವ ಸುರೇಶ್‍ ಕುಮಾರ್

Update: 2021-03-17 12:12 GMT

ತುಮಕೂರು, ಮಾ.17: ರಾಜ್ಯ ಸರಕಾರ ಮಕ್ಕಳ ಹಿತ ಮತ್ತು ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ವರ್ಷವನ್ನು ಜುಲೈನಿಂದ ಆರಂಭಿಸುವ ಕುರಿತು ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಮಕ್ಕಳ ಹಿತ ಮತ್ತು ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ವರ್ಷವನ್ನು ಜುಲೈನಿಂದ ಆರಂಭಿಸುವ ಕುರಿತು ಚಿಂತನೆ ನಡೆಸಿದೆ. ಕಳೆದ ಬಾರಿ ಎಲ್ಲ ತರಗತಿಗಳಲ್ಲೂ ಬಹುತೇಕ ಪಾಠ ಪ್ರವಚನವನ್ನು ಮಾಡಲಾಗಿತ್ತು. ಆದರೆ ಈ ಬಾರಿ ಆನ್‍ಲೈನ್ ತರಗತಿಗಳೇ ಜಾಸ್ತಿ ನಡೆದಿರುವುದರಿಂದ ಮತ್ತೊಂದು ರೀತಿಯ ಸವಾಲು ಎದುರಾಗಿದೆ. ಯಾವುದೇ ಸವಾಲು ಎದುರಾದರೂ ಮಕ್ಕಳ ಹಿತ ಮತ್ತು ಅವರ ಭವಿಷ್ಯವನ್ನು ಗಮನ ದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. 

ಕೋವಿಡ್ 2ನೇ ಅಲೆ ಆರಂಭವಾಗುವ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಯೋಗಕ್ಷೇಮ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ತರಗತಿಗಳ ವಿಚಾರದಲ್ಲಿ ಆರೋಗ್ಯ ಇಲಾಖೆಯ ಜತೆ ಸಮಾಲೋಚನೆ ನಡೆಸದೆ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳುವುದಿಲ್ಲ. ಮಕ್ಕಳ ಯೋಗ ಕ್ಷೇಮದ ಹಿನ್ನೆಲೆಯಲ್ಲಿ ಯಾವುದೇ ಶಾಲೆ ಸರಕಾರದ ನಿರ್ದೇಶನ, ನಿಯಮವನ್ನು ಉಲ್ಲಂಘಿಸುವುದು ಒಳಿತಲ್ಲ. ಈ ಸಂಬಂಧ ಈಗಾಗಲೇ ಎಲ್ಲ ಶಾಲೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ಈಗಾಗಲೇ 6 ರಿಂದ 12ನೇ ತರಗತಿವರೆಗೆ ತರಗತಿಗಳು ಆರಂಭವಾಗಿವೆ. 1 ರಿಂದ 5 ನೇ ತರಗತಿ ವರೆಗೆ ತರಗತಿ ಆರಂಭಿಸಿಲ್ಲ. ಆದರೆ ಪರ್ಯಾಯವಾಗಿ ತರಗತಿ ನಡೆಸಲಾಗುತ್ತಿದೆ. ಚಂದನ ವಾಹಿನಿ, ಆಕಾಶವಾಣಿ ಮೂಲಕ ಮತ್ತು ಆನ್‍ಲೈನ್ ತರಗತಿ ಮಾಡಲಾಗುತ್ತಿದೆ. ಅಲ್ಲದೆ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ.1 ರಿಂದ 5ನೇ ತರಗತಿವರೆಗೆ ತರಗತಿ ಆರಂಭಿಸಬೇಕು, ಮಕ್ಕಳೆಲ್ಲ ಶೈಕ್ಷಣಿಕವಾಗಿ ವಿಮುಖರಾಗುತ್ತಿದ್ದಾರೆ ಎಂಬ ಮಾತು ಬಹಳಷ್ಟು ಜನರಿಂದ ಕೇಳಿ ಬರುತ್ತಿದೆ. ಆದರೆ ಮಕ್ಕಳ ಆರೋಗ್ಯ ದೃಷ್ಠಿಯಿಂದ ಈ ತರಗತಿಗಳನ್ನು ಆರಂಭಿಸುವ ಚಿಂತನೆ ನಡೆಸಿಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News