ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಬಗ್ಗೆ ಕಾನೂನು ಸಚಿವರೊಂದಿಗೆ ಚರ್ಚಿಸಿ ತೀರ್ಮಾನ: ಸಚಿವ ಕೋಟ

Update: 2021-03-17 12:28 GMT

ಬೆಂಗಳೂರು, ಮಾ.17: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ(ಜಾತಿ-ಜನಗಣತಿ) ಜಾರಿಗೆ ತರುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಕಾನೂನು ಸಚಿವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನಕ್ಕೆ ಬರಲಾಗುವುದು ಎಂದು ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಜಾತಿ-ಜನಗಣತಿ ಸಮೀಕ್ಷೆಯನ್ನು ಮಾಡಲಾಗಿದೆ. ಈ ಸಮೀಕ್ಷೆಯ ವರದಿ ಜಾರಿ ತರುವ ಸಂಬಂಧ ಚರ್ಚಿಸಿ ಮುಂದಿನ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಪ್ರವರ್ಗಗಳ ಮೀಸಲಾತಿ ಪ್ರಮಾಣ ಶೇ.32ರಷ್ಟು ಇದೆ. ಈ ಪ್ರಮಾಣವನ್ನು ಹೆಚ್ಚಿಸುವಂತೆ ಹೋರಾಟಗಳೂ ನಡೆಯುತ್ತಿವೆ. ನೂರಾರು ಜಾತಿಗಳು ಹಿಂದುಳಿದ ವರ್ಗಗಳಲ್ಲಿದ್ದು, ಅವುಗಳೂ ಮೀಸಲಾತಿ ಹೆಚ್ಚಳ ಹಾಗೂ ಕುರುಬ ಜಾತಿಯವರು ಎಸ್ಟಿ ಜಾತಿಗೆ ಸೇರಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಸುಪ್ರೀಂಕೋರ್ಟ್ ಆದೇಶದಂತೆ ಶೇ.50ರಷ್ಟು ಮೀಸಲಾತಿ ಮೀರದ ಹಾಗೇ ಎಚ್ಚರಿಕೆಯನ್ನೂ ವಹಿಸಬೇಕಾಗಿದೆ ಎಂದು ತಿಳಿಸಿದರು.    

ಪರಿಷತ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಹಿಂದುಳಿದ ಸಮುದಾಯಗಳನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಬಲ ತುಂಬುವ ಕೆಲಸವಾಗುತ್ತಿಲ್ಲ. ಬ್ರಾಹ್ಮಣ, ಲಿಂಗಾಯತ ಇತರೆ ಮೇಲ್ಜಾತಿಗಳ ನಿಗಮಗಳಿಗೆ ನೂರಾರು ಕೋಟಿ ರೂ.ಹಣ ನೀಡುವ ಕೆಲಸದಲ್ಲಿ ಸರಕಾರ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಹೇಳಿದರು.

ಕೆಲವು ಹಿಂದುಳಿದ ಸಮಾಜದ ಜನರು ಅಧಿಕಾರಿ ಆಗುವುದು ದೂರದ ಮಾತಾಗಿದ್ದು, ವಿಧಾನಸೌಧದಲ್ಲಿ ಡಿ ದರ್ಜೆಯ ನೌಕರನೂ ಆಗಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News