×
Ad

ಶಿವಮೊಗ್ಗ ಜಿಲ್ಲೆಗೆ ಬೆಣ್ಣೆ, ವಿಜಯಪುರ ಜಿಲ್ಲೆಗೆ ಸುಣ್ಣ: ಸರಕಾರದ ವಿರುದ್ಧ ಶಾಸಕ ಯತ್ನಾಳ್ ಟೀಕೆ

Update: 2021-03-17 18:02 IST

ಬೆಂಗಳೂರು, ಮಾ. 17: ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಗೆ 384 ಕೋಟಿ ರೂ., ವಿಜಯಪುರ ಜಿಲ್ಲೆ ವಿಮಾನ ನಿಲ್ದಾಣಕ್ಕೆ 220 ಕೋಟಿ ರೂ., ಒಂದು ಜಿಲ್ಲೆಗೆ ಬೆಣ್ಣೆ, ಮತ್ತೊಂದು ಜಿಲ್ಲೆಗೆ ಸುಣ್ಣ ಸರಿಯಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ತಾರತಮ್ಯ ನೀತಿ ಅನುಸರಿಸುವುದು ಏಕೆ? ಎಂದು ಆಡಳಿತ ಪಕ್ಷದ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಸರಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಪ್ರಶ್ನೆಗೆ ಸಚಿವ ಆನಂದ್ ಸಿಂಗ್ ನೀಡಿರುವ ಉತ್ತರವನ್ನು ನೋಡಿ ಆಕ್ರೋಶ ಹೊರಹಾಕಿದ ಯತ್ನಾಳ್, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಇಳಿಯಲು, ದೊಡ್ಡ ಆಸನಗಳುಳ್ಳ ವಿಮಾನ ಹಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಆದರೆ, ತೋಟಗಾರಿಕೆಗಳ ಬೆಳೆಗಳು ಹೆಚ್ಚಿರುವ ಮತ್ತು ಪ್ರವಾಸೋದ್ಯಮದ ಜೊತೆಗೆ ರಫ್ತು ವಹಿವಾಟಿಗೆ ವಿಫುಲ ಅವಕಾಶವಿರುವ ವಿಜಯಪುರ ಜಿಲ್ಲೆ ವಿಮಾನ ನಿಲ್ದಾಣಕ್ಕೆ ಕಡಿಮೆ ಅನುದಾನ ನೀಡಲಾಗಿದೆ. ಇಲ್ಲಿ ವಿಮಾನ ನಿಲ್ದಾಣ ಅತ್ಯಂತ ಕಿರಿದಾಗಿದೆ. ರಾತ್ರಿ ವಿಮಾನ ಇಳಿಯಲು ಅವಕಾಶವಿಲ್ಲ. ಇಲ್ಲಿ ಹೆಸರಿಗಷ್ಟೇ ವಿಮಾನ ನಿಲ್ದಾಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿಯಲ್ಲೂ ಅನ್ಯಾಯ ಮಾಡಲಾಗಿದೆ. ಅಭಿವೃದ್ಧಿ ವಿಷಯದಲ್ಲೂ ಇಂತಹ ಮಲತಾಯಿ ಧೋರಣೆ ಸರಿಯಲ್ಲ. ಈ ಸರಕಾರ ರಚನೆಯಾಗಲು ಉತ್ತರ ಕರ್ನಾಟಕ ಭಾಗದವರೆ ಮೂಲ ಕಾರಣ. ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿಯಲ್ಲೇ ವಿಜಯಪುರ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ಅನಂತರ ಉತ್ತರ ನೀಡಿದ ಸಚಿವ ಆನಂದ್‍ಸಿಂಗ್, ಸರಕಾರ ಯಾವುದೇ ಜಿಲ್ಲೆಗೆ ಅನ್ಯಾಯ ಮಾಡಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಹೈಟೆನ್ಷನ್ ವೈಯರ್ ಹಾದು ಹೋಗುತ್ತಿದ್ದುದರಿಂದ ಅಲ್ಲಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಶಿವಮೊಗ್ಗ, ವಿಜಯಪುರ, ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ನಾನೇ ಖುದ್ದು ವಿಜಯಪುರಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸುತ್ತೇನೆ. ಯಾವುದೇ ತಾರತಮ್ಯ ಮಾಡುವ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

'ಸಿಎಂ ಪಲಾಯನ'

‘ಅಧಿವೇಶನದಲ್ಲಿ ನನ್ನ ಪ್ರಶ್ನೆ ಬರುವವರೆಗೂ ಇಲ್ಲೇ ಇದ್ದ ಮುಖ್ಯಮಂತ್ರಿ ಬಿ.ಎಸ್.ಡಿಯೂರಪ್ಪನವರು, ನನ್ನ ಪ್ರಶ್ನೆ ಬರುತ್ತಿದ್ದಂತೆ ಹೊರಗೆ ಹೋಗಿದ್ದಾರೆ. ಈ ಸರಕಾರದಿಂದ ವಿಜಯಪುರ ಜಿಲ್ಲೆಗೆ ಅನ್ಯಾಯ ಆಗುತ್ತಿದೆ. ಉ.ಕ.ಭಾಗಕ್ಕೆ ಆಗಿರುವ ತಾರತಮ್ಯ ಸರಿಪಡಿಸಬೇಕು. ಅಲ್ಲದೆ, ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿಯಲ್ಲೆ ನಮ್ಮ ಜಿಲ್ಲೆ ವಿಮಾನ ನಿಲ್ದಾಣಕ್ಕೆ ಅನುದಾನ ಒದಗಿಸಿ, ಅಭಿವೃದ್ಧಿಪಡಿಸಬೇಕು'

-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News