×
Ad

ರಾಷ್ಟ್ರೀಯ ಭದ್ರತಾ ದಳದ ಮಹಾ ನಿರ್ದೇಶಕರಾಗಿ ಕೊಡಗಿನ ಅಯ್ಯಪ್ಪ ಗಣಪತಿ ನೇಮಕ

Update: 2021-03-17 19:02 IST

ಮಡಿಕೇರಿ, ಮಾ.17: ಹಿರಿಯ ಐಪಿಎಸ್ ಅಧಿಕಾರಿ ಕೊಡಗಿನ ಮನೆಯಪಂಡ ಅಯ್ಯಪ್ಪ ಗಣಪತಿ ಅವರನ್ನು ರಾಷ್ಟ್ರೀಯ ಭದ್ರತಾ ದಳದ(ಎನ್.ಎಸ್.ಜಿ) ಮಹಾ ನಿರ್ದೇಶಕರನ್ನಾಗಿ (ಡೈರೆಕ್ಟರ್ ಜನರಲ್) ನೇಮಕ ಮಾಡಲಾಗಿದೆ. ಕನ್ನಡಿಗರಾದ ಅದರಲ್ಲೂ 'ಸೈನಿಕರ ತವರು' ಖ್ಯಾತಿಯ ಕೊಡಗು ಜಿಲ್ಲೆಯ ಐಪಿಎಸ್ ಅಧಿಕಾರಿಯೊಬ್ಬರು ಈ ಹುದ್ದೆಗೆ ಏರಿರುವುದು ಇದೇ ಮೊದಲು ಎಂದು ತಿಳಿದು ಬಂದಿದ್ದು, ಕೊಡಗು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿದೆ. 

ಇದಕ್ಕೂ ಮೊದಲು ಎಂ.ಎ.ಗಣಪತಿ ಅವರು ನಾಗರಿಕ ವಿಮಾನಯಾನದ (ಭದ್ರತಾ ವಿಭಾಗ) ಮಹಾ ನಿರ್ದೇಶಕರಾಗಿ ಕರ್ತವ್ಯದಲ್ಲಿದ್ದರು. 1986ನೇ ಸಾಲಿನ ಉತ್ತರಾಖಂಡ್ ಕೇಡರ್ ನ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಎಂ.ಎ.ಗಣಪತಿ 2024ರ ಫೆಬ್ರವರಿ 29ರಂದು ಸೇವೆಯಿಂದ ನಿವೃತ್ತಿಯಾಗಲಿದ್ದು, ಅಲ್ಲಿಯವೆರೆಗೆ ಎನ್.ಎಸ್.ಜಿಯ ಮಹಾ ನಿರ್ದೇಶಕರಾಗಿ ಕರ್ತವ್ಯದಲ್ಲಿ ಮುಂದುವರಿಯಲಿದ್ದಾರೆ.

ದಕ್ಷಿಣ ಕೊಡಗಿನ ಕುಂದ ಗ್ರಾಮದ ಮನೆಯಪಂಡ ಅಪ್ಪಯ್ಯ(ವಿಠಲ ಲಾಯರ್) ಪ್ರೇಮಲತಾ(ನಿವೃತ್ತ ಶಿಕ್ಷಕಿ) ದಂಪತಿಯ ಪುತ್ರರಾಗಿರುವ ಎಂ.ಎ. ಗಣಪತಿ ತಮ್ಮ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಕುಂದ ಗ್ರಾಮದಲ್ಲಿ ಪೂರ್ಣಗೊಳಿಸಿದ್ದರೆ, ಚೆನ್ನೈನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ಬಳಿಕ ಸ್ನಾತಕೋತ್ತರ ಪದವಿಯನ್ನು ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡಿದ್ದಾರೆ.

1986ರ ಸಾಲಿನ ಉತ್ತರ ಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದ ಗಣಪತಿ ಅವರು ಉತ್ತರಾಖಂಡ್ ರಾಜ್ಯ ರಚನೆಯಾದ ಬಳಿಕ ಉತ್ತರಾಖಂಡ್ ಕೇಡರ್ ಗೆ ನಿಯೋಜನೆಯಾಗಿದ್ದರು. ಈ ಹಿಂದೆ ಬಿಸಿಎಎಸ್ ಮುಖ್ಯಸ್ಥರ ಹುದ್ದೆಯಲ್ಲಿದ್ದ ರಾಕೇಶ್ ಅಸ್ತಾನ ಅವರನ್ನು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಿದ ಬಳಿಕ ಈ ಹುದ್ದೆ ಖಾಲಿ ಉಳಿದಿತ್ತು. ಈ ಹಿನ್ನಲೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಎಂ.ಎ. ಗಣಪತಿ ಅವರನ್ನು ಆ ಸ್ಥಾನಕ್ಕೆ ನೇಮಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

2010ರಿಂದ ಕೇಂದ್ರ ಗೃಹ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಎಂ.ಎ. ಗಣಪತಿ ಕರ್ತವ್ಯ ನಿರ್ವಹಿಸಿದ್ದಾರೆ. ಗೃಹ ಇಲಾಖೆಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದ ಗಣಪತಿ ಅವರನ್ನು 2016ರಲ್ಲಿ ಉತ್ತರಾಖಂಡ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನಾಗಿಯೂ ನೇಮಕ ಮಾಡಲಾಗಿತ್ತು. ಮಾತ್ರವಲ್ಲದೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‍ಎಫ್) ವಿಶೇಷ ಮಹಾ ನಿರ್ದೇಶಕರಾಗಿ ಮತ್ತು ವಿಮಾನ ನಿಲ್ದಾಣದ ಮುಖ್ಯಸ್ಥರಾಗಿಯೂ ಮನೆಯಪಂಡ ಗಣಪತಿ ಕರ್ತವ್ಯ ನಿರ್ವಹಿಸಿದ್ದಾರೆ. 

1999ರಲ್ಲಿ ಕೇಂದ್ರಿಯ ತನಿಖಾ ಸಂಸ್ಥೆ(ಸಿಬಿಐ)ಯಲ್ಲೂ ಸೇವೆ ಸಲ್ಲಿಸಿದ್ದ ಎಂ.ಎ.ಗಣಪತಿ, ತಮ್ಮ 30 ವರ್ಷಗಳ ಸೇವೆಯಲ್ಲಿ ಸೋನೆಬಾಂದ್ರಾ, ಮೊರಾದಾಬಾದ್ ನಗರ ಮತ್ತು ಹಾರ್‍ದೋಯಿ ಸೇರಿದಂತೆ ಉತ್ತರ ಭಾರತದ ಆಯಕಟ್ಟಿನ ಮತ್ತು ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ದಕ್ಷತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅತ್ಯುನ್ನತ ಸೇವೆಗಾಗಿ ಎಂ.ಎ. ಗಣಪತಿ(ಐಪಿಎಸ್) ಅವರು ರಾಷ್ಟ್ರಪತಿಗಳ ವಿಶೇಷ ಸೇವಾ ಪದಕವನ್ನು ಪಡೆದಿದ್ದಾರೆ. ಅವರ ಸೇವಾ ವರದಿ ಆಧರಿಸಿ ಎನ್.ಎಸ್.ಜಿಯ ಮುಖ್ಯಸ್ಥರನ್ನಾಗಿ ಕೇಂದ್ರ ಸರಕಾರ ಮನೆಯಪಂಡ ಗಣಪತಿ ಅವರನ್ನು ನಿಯೋಜಿಸಿದೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.

ಏನಿದು ಎನ್.ಎಸ್.ಜಿ ?
ರಾಷ್ಟ್ರೀಯ ಭದ್ರತಾ ದಳ(ಎನ್.ಎಸ್.ಜಿ)ವನ್ನು ಭಾರತದ ಆಂತರಿಕ ಭದ್ರತೆಗಾಗಿ 1986ರಲ್ಲಿ ರಚಿಸಲಾಗಿದ್ದು, ಇವರನ್ನು ‘ಬ್ಲ್ಯಾಕ್‍ಕ್ಯಾಟ್ಸ್’ ಎಂದೂ ಕರೆಯಲಾಗುತ್ತದೆ. ದೇಶದ ಆಂತರಿಕ ರಕ್ಷಣಾ ವ್ಯವಸ್ಥೆಯಲ್ಲಿಯೇ ಈ ಎನ್.ಎಸ್.ಜಿ ಅತ್ಯಂತ ‘ಘಾತಕ ಪಡೆ’ ಎಂಬ ಖ್ಯಾತಿಯನ್ನೂ ಪಡೆದಿದೆ. ಈ ಪಡೆಗೆ ಭಾರತೀಯ ಭೂ ಸೇನೆಯಿಂದ ಶೇ.53 ಮತ್ತು ಅರೆ ಸೇನಾ ಪಡೆಗಳಿಂದ ಶೇ.47ರಷ್ಟು ಯೋಧರನ್ನು ಅತ್ಯಂತ ಕಠಿಣ ತರಬೇತಿ ನೀಡುವ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ‘ಸರ್ವತ್ರ ಸರ್ವೋತ್ತಮ್ ಸುರಕ್ಷಾ’ ಎಂಬುದು ಈ ಪಡೆಯ ಘೋಷ ವಾಕ್ಯವಾಗಿದೆ.

ಸಂಘಟಿತ ಭಯೋತ್ಪಾದಕ ಕೃತ್ಯದ ಕಾರ್ಯಾಚರಣೆ, ಗಣ್ಯಾತಿಗಣ್ಯ ವ್ಯಕ್ತಿಗಳ ರಕ್ಷಣೆಯ ಜವಾಬ್ದಾರಿಗಾಗಿ ಈ ಪಡೆಯನ್ನು ಬಳಸಿಕೊಳ್ಳಲಾಗುತ್ತದೆ. ಕ್ಲಿಷ್ಟ ಹಾಗೂ ವಿಷಮ ಪರಿಸ್ಥಿತಿಯಲ್ಲಿ ಅತ್ಯಂತ ಕರಾರುವಕ್ಕಾಗಿ ದಾಳಿ ಸಂಘಟಿಸುವ ಮೂಲಕ ವಿಜಯ ಸಾಧಿಸುವುದು ಎನ್.ಎಸ್.ಜಿಯ ಹೆಗ್ಗುರುತಾಗಿದೆ. ತಲೆ ಕೂದಲಿನಿಂದ ಕಾಲಿನ ಉಗುರಿನವರೆಗೂ ಸಂಪೂರ್ಣ ಕಪ್ಪು ಬಣ್ಣದ ಸಮವಸ್ತ್ರ ತೊಟ್ಟು ತಮ್ಮ ಗುರುತನ್ನು ಈ ಪಡೆ ಮರೆಮಾಚುವುದರಿಂದ ಇವರನ್ನು ಬ್ಲ್ಯಾಕ್‍ಕ್ಯಾಟ್ಸ್ ಎಂದು ಕರೆಯಲಾಗುತ್ತದೆ. ಇಂತಹ ಘಾತಕ ಪಡೆಯ ಮುಖ್ಯಸ್ಥರಾಗಿ ಮನೆಯಪಂಡ ಎ.ಗಣಪತಿ ಅವರು ನೇಮಕವಾಗುವ ಮೂಲಕ ಕೊಡಗು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News