ಯೋಗೀಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್
ಬೆಂಗಳೂರು, ಮಾ.17: ಜಿಪಂ ಸದಸ್ಯ ಯೋಗೀಶ್‍ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿ ಆದೇಶಿಸಿದೆ.
ಜಾಮೀನು ಕೋರಿ ಆರೋಪಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ವಜಾ ಮಾಡಿದೆ.
ವಿನಯ್ ಜಾಮೀನು ಅರ್ಜಿಗೆ ಅಕ್ಷೇಪಣೆ ಸಲ್ಲಿಸಿದ್ದ ಸಿಬಿಐ, ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಹತ್ಯೆ ನಡೆದಿದೆ. ಜಿಮ್‍ನಿಂದ ಹೊರ ಬರುವ ವೇಳೆ ಯೋಗೀಶ್ ಗೌಡ ಹತ್ಯೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಾದ ಬಳಿಕ ಕೊಲೆ ಮಾಡಿರದ ಆರೋಪಿಗಳು ಬಂದು ತಾವೇ ಕೊಲೆ ಮಾಡಿರುವುದಾಗಿ ಶರಣಾಗಿದ್ದರು.
ಕೊಲೆ ನೋಡಿದ್ದ ಪ್ರತ್ಯಕ್ಷ ಸಾಕ್ಷಿಗಳನ್ನು ಅರ್ಜಿದಾರರು ಬೆದರಿಸಿ ಪ್ರಕರಣದಿಂದ ದೂರ ಉಳಿಯುವಂತೆ ನೋಡಿಕೊಂಡಿದ್ದರು. ಇದಕ್ಕೆ ಸ್ಥಳೀಯ ಪೊಲೀಸರು ಹಾಗೂ ವಿನಯ್ ಸಂಬಂಧಿಯೊಬ್ಬರು ನೆರವು ನೀಡಿದ್ದರು. ಈ ಎಲ್ಲ ಅಂಶಗಳು ಸಿಬಿಐ ತನಿಖೆ ವೇಳೆ ಪತ್ತೆಯಾಗಿವೆ ಎಂದು ಸಿಬಿಐ ಆಕ್ಷೇಪಣೆ ಸಲ್ಲಿಸಿತ್ತು. ಸಿಬಿಐ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಮಾಜಿ ಸಚಿವ ವಿನಯ್ ಕುಲಕರ್ಣಿಯ ಜಾಮೀನು ತಿರಸ್ಕರಿಸಿದೆ.
ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಳೆದ ನವೆಂಬರ್ 5ರಂದು ಬಂಧನಕ್ಕೆ ಒಳಗಾಗಿರುವ ಮಾಜಿ ಶಾಸಕ ವಿನಯ್ ಕುಲಕರ್ಣಿ ಮೊದಲಿಗೆ ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಸಿಗದೆ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ್ ಪೀಠದಲ್ಲಿಯೂ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿತ್ತು.
ಆ ಬಳಿಕ ನಿಯಮಗಳ ಅನುಸಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು. ಪ್ರಕರಣ ವರ್ಗಾವಣೆಯಾಗುತ್ತಲೇ 3 ಬಾರಿ ಜಾಮೀನು ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಪೀಠವು ಜಾಮೀನು ನೀಡಲು ನಿರಾಕರಿಸಿ ಆದೇಶಿಸಿತು.