5 ವರ್ಷಗಳಲ್ಲಿ ರಾಜ್ಯದಲ್ಲಿ 32 ಮಂದಿ ಮ್ಯಾನ್‍ಹೋಲ್‍ನಲ್ಲಿ ಸಿಲುಕಿ ಸಾವು: ಸಚಿವ ಶ್ರೀರಾಮುಲು
ಬೆಂಗಳೂರು, ಮಾ.17: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ (ಮಲಗುಂಡಿ ಸ್ವಚ್ಛಗೊಳಿಸುವುದು) ಕಾರ್ಯ ನಿರ್ವಹಿಸುವಾಗ 32 ಜನರು ಮೃತಪಟ್ಟಿದ್ದು, ತಲಾ 5 ಲಕ್ಷ ರೂ.ಪರಿಹಾರ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕಾರ್ಯ ನಿರ್ವಹಿಸಲು ಹೋಗಿ ಕಲಬುರಗಿ ನಗರದಲ್ಲಿ ಮೃತಪಟ್ಟ ಇಬ್ಬರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಧಿಕಾರಿಗಳ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ನಿರ್ಮೂಲನೆ ಆಗಬೇಕಾಗಿದೆ. ಹೀಗಾಗಿ, ಆರ್‍ಡಿಪಿಆರ್, ಬಿಡಬ್ಲ್ಯೂಎಸ್‍ಎಸ್‍ಬಿ, ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದು, ಮ್ಯಾನುಯಲ್ ಸ್ಕ್ಯಾವೆಂಜಿಂಗ್ ತಡೆಗಟ್ಟುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತೇವೆ. ಮಲಗುಂಡಿ ಸ್ವಚ್ಛಗೊಳಿಸಲು ಯಂತ್ರೋಪಕರಣಗಳ ಬಳಕೆಯನ್ನು ಹೆಚ್ಚಾಗಿ ಬಳಸಬೇಕಿದೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಮಾತನಾಡಿ, ಮಲಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರಿಗೆ ಆರ್ಥಿಕ ಶಕ್ತಿ ತುಂಬಲು ಸಫಾಯಿ ಕರ್ಮಚಾರಿ ನಿಗಮವನ್ನು ಸ್ಥಾಪಿಸಲಾಗಿದೆ. ಬಜೆಟ್‍ನಲ್ಲಿ 2 ಕೋಟಿ ರೂ.ಮೀಸಲಿರಿಸಲಾಗಿದೆ. ನಾನೂ ಅದೇ ಸಮಾಜದಿಂದ ಬಂದಿದ್ದು, ಆ ಎಲ್ಲ ಸಮಸ್ಯೆಯೂ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.
ಮಧ್ಯಪ್ರವೇಶಿಸಿ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಅವರು, ಪ್ರಧಾನಿ ಅವರು ಪೌರ ಕಾರ್ಮಿಕರ ಕೆಲಸ ಅಧ್ಯಾತ್ಮದ ಕೆಲಸವೆಂದು ಹೇಳಿದ್ದರು ಎಂದರು. ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಅವರು, ಬೇರೆಯವರು ಪ್ರಶ್ನೆ ಕೇಳುವಾಗ ನೀವು ಎದ್ದು ನಿಲ್ಲಬಾರದು ಎಂದು ಹರಿಪ್ರಸಾದ್ ಅವರಿಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಪೀಠದಿಂದ ತಾರತಮ್ಯ ಆಗಬಾರದು ಎಂದು ಹೇಳಿದರು.
ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಪೀಠವನ್ನು ಗದರಿಸುವ ಕೆಲಸಕ್ಕೆ ಕೈಹಾಕಬಾರದು. ಹಳೆಯ ಹವ್ಯಾಸವನ್ನು ಮತ್ತೆ ನೆನೆಪಿಸಿಕೊಂಡಿರುವ ವಾಸನೆ ಇಲ್ಲಿ ಬಡಿಯುತ್ತಿದೆ ಎಂದು ಹರಿಪ್ರಸಾದ್ ವಿರುದ್ಧ ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, ಆಯನೂರು ಮಂಜುನಾಥ್ ಅವರು ಎರಡ್ಮೂರು ಪಾರ್ಟಿ ಓಡಾಡಿಕೊಂಡು ಬಂದವರು ಎಂದು ಕುಟುಕಿದರು.
‘ರಾಜ್ಯದಲ್ಲಿ 5080 ಮ್ಯಾನುಯಲ್ ಸ್ಕ್ಯಾವೆಂಜರ್ ಗಳು ಇದ್ದು, ಬೆಂಗಳೂರು ನಗರ 135, ಕೋಲಾರ 1224, ಮೈಸೂರು 1016, ಬೆಂಗಳೂರು ನಗರ 1625 ಸೇರಿ 21 ಜಿಲ್ಲೆಗಳಲ್ಲಿ ಒಟ್ಟು 5080 ಮ್ಯಾನುಯಲ್ ಸ್ಕ್ಯಾವೆಂಜರ್ ಗಳು ಇದ್ದಾರೆ.’
-ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ