×
Ad

ಸೊಸೈಟಿಗಳ ನೋಂದಣಿ ವಿಧೇಯಕ: ತಿದ್ದುಪಡಿಗಳೊಂದಿಗೆ ಮಂಡಿಸುವುದಾಗಿ ರಾಜ್ಯ ಸರಕಾರ ಭರವಸೆ

Update: 2021-03-17 20:14 IST

ಬೆಂಗಳೂರು, ಮಾ.17: ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಸ್ತಾವ ಹೊಂದಿರುವ 2021ನೆ ಸಾಲಿನ ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ವಿಧೇಯಕವನ್ನು ಕೆಲವು ತಿದ್ದುಪಡಿಗಳೊಂದಿಗೆ ಮಂಡಿಸುವುದಾಗಿ ರಾಜ್ಯ ಸರಕಾರ ಭರವಸೆ ನೀಡಿದೆ.

ಬುಧವಾರ ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಹಕಾರ ಸಂಘಗಳ ರಿಜಿಸ್ಟ್ರಾರ್ ಜೊತೆ ಸಭೆ ನಡೆಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಶಾಸಕರಾದ ರಮೇಶ್ ಕುಮಾರ್, ನಸೀರ್ ಅಹ್ಮದ್, ಝಮೀರ್ ಅಹ್ಮದ್ ಖಾನ್ ಈ ವಿಧೇಯಕದಲ್ಲಿರುವ ನ್ಯೂನತೆಗಳ ಬಗ್ಗೆ ಸಚಿವರ ಗಮನ ಸೆಳೆದರು.

ರಾಜ್ಯದಲ್ಲಿ ವಕ್ಫ್ ಕಾಯ್ದೆ ಜಾರಿಗೆ ಬರುವ ಮುನ್ನ 1960ರ ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮ ಜಾರಿಯಾಗಿತ್ತು. ಅದರಂತೆ, ಸುಮಾರು 6 ಸಾವಿರ ಅಲ್ಪಸಂಖ್ಯಾತರ ಸಂಸ್ಥೆಗಳು ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮದಂತೆ ನೋಂದಣಿಯಾಗಿವೆ. ವಕ್ಫ್ ಕಾಯ್ದೆ ಜಾರಿಗೆ ಬಂದ ನಂತರ ಅವುಗಳು ವಕ್ಫ್ ಬೋರ್ಡ್ ಅಧೀನಕ್ಕೆ ಸೇರ್ಪಡೆಯಾಗಿವೆ ಎಂದು ತಿಳಿಸಿದರು.

ಸೊಸೈಟಿಗಳ ನೋಂದಣಿ ಅಧಿನಿಯಮದಂತೆ ವಕ್ಫ್ ಬೋರ್ಡ್ ಅಧೀನಕ್ಕೆ ಸೇರಿಸಲ್ಪಟ್ಟಿರುವ ಸಂಸ್ಥೆಗಳು, ಬೈಲಾ ರಚನೆ ಮಾಡಬೇಕು, ವಾರ್ಷಿಕ ಸಾಮಾನ್ಯ ಸಭೆಗಳನ್ನು ಕರೆಯಬೇಕು, ಆಡಳಿತ ಮಂಡಳಿಗಳಿಗೆ ಚುನಾವಣೆಗಳನ್ನು ನಡೆಸಬೇಕಿದೆ. ಸೊಸೈಟಿಗಳ ನೋಂದಣಿ ಅಧಿನಿಯಮದಡಿಯಲ್ಲಿ ಉಳಿದುಕೊಂಡಿರುವ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿಕೊಳ್ಳಿ ನಮ್ಮ ಅಭ್ಯಂತರವಿಲ್ಲ. ಆದರೆ, ಈಗಾಗಲೆ ವಕ್ಫ್ ಬೋರ್ಡ್ ಅಧೀನದಲ್ಲಿರುವ ಸಂಸ್ಥೆಗಳಿಗೆ ಈ ವಿಧೇಯಕದಿಂದ ವಿನಾಯಿತಿ ನೀಡುವಂತೆ ವಿರೋಧ ಪಕ್ಷದ ಸದಸ್ಯರು ಸಚಿವರಿಗೆ ಮನವಿ ಮಾಡಿದರು.

ವಿರೋಧ ಪಕ್ಷದ ಸದಸ್ಯರಿಗೆ ಸ್ಪಂದಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಈಗಾಗಲೆ ಸಿದ್ಧವಾಗಿರುವ ವಿಧೇಯಕದ ಬದಲಾಗಿ ತಿದ್ದುಪಡಿಯೊಂದಿಗೆ ಹೊಸ ವಿಧೇಯಕವನ್ನು ಮಂಡಿಸಲು ಸಿದ್ಧತೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

'ವಾರ್ತಾಭಾರತಿ'ಯಲ್ಲಿ ಸುದ್ದಿ ಪ್ರಕಟವಾಗಿತ್ತು

ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ವಿಧೇಯಕ 2021 ಕುರಿತು ವಾರ್ತಾಭಾರತಿ ಮಾ.14ರಂದು ಮುಖಪುಟದಲ್ಲಿ ಸುದ್ದಿ ಪ್ರಕಟಿಸಿತ್ತು.

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಅಭಿನಂದನೆ

ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ವಿಧೇಯಕ 2021ಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಸಂಘ-ಸಂಸ್ಥೆಗಳಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಲು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಹಕಾರ ಸಂಘಗಳ ರಿಜಿಸ್ಟ್ರಾರ್ ಜೊತೆ ಸಭೆ ನಡೆಸಿ, ಅವರ ಮನವೊಲಿಸಲು ಯಶಸ್ವಿಯಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರಿಗೆ ಅಲ್ಪಸಂಖ್ಯಾತ ಸಮುದಾಯಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

-ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News