ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಎಸ್‍ವೈಗೆ ಸಂಕಷ್ಟ: ಚಾರ್ಜ್‍ಶೀಟ್ ಪ್ರಕಾರ ಕ್ರಮ ಜರುಗಿಸಲು ಹೈಕೋರ್ಟ್ ಆದೇಶ

Update: 2021-03-17 16:30 GMT

ಬೆಂಗಳೂರು, ಮಾ.17: ಬೆಂಗಳೂರು ಉತ್ತರ ಜಾಲ ಹೋಬಳಿಯ ಹೂವಿನಾಯಕನಹಳ್ಳಿ ಕೆಐಎಡಿಬಿ ಜಮೀನು ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಸಲ್ಲಿಸಿರುವ ಚಾರ್ಜ್‍ಶೀಟ್ ಪ್ರಕಾರ ಮುಂದಿನ ಕ್ರಮ ಜರುಗಿಸುವಂತೆ ಲೋಕಾಯುಕ್ತ ಕೋರ್ಟ್ ಗೆ ಹೈಕೋರ್ಟ್ ಬುಧವಾರ ಆದೇಶಿಸಿದೆ. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನ್ಯಾಯ್ಡುಗೆ ಸಂಕಷ್ಟ ಎದುರಾಗಿದೆ.

ಡಿನೋಟಿಫಿಕೇಷನ್ ಪ್ರಕರಣದಿಂದ ಸಿಎಂ ಬಿಎಸ್‍ವೈ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಕೈಬಿಟ್ಟು ಲೋಕಾಯುಕ್ತ ಕೋರ್ಟ್ ಹೊರಡಿಸಿದ್ದ ಆದೇಶ ರದ್ದು ಕೋರಿ ಉದ್ಯಮಿ ಆಲಂ ಪಾಷಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಹಿಂದೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಚಾರ್ಜ್‍ಶೀಟ್ ಪ್ರಕಾರ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಗೆ ಆದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಏನಿದು ಪ್ರಕರಣ: ಬೆಂಗಳೂರು ಉತ್ತರ ಜಾಲ ಹೋಬಳಿಯ ಹೂವಿನಾಯಕನಹಳ್ಳಿ ಗ್ರಾಮದಲ್ಲಿ ಕೈಗಾರಿಕಾ ಸ್ಥಾಪನೆಗಳಿಗೆ ಕೆಐಎಡಿಬಿ ವಶಪಡಿಸಿಕೊಂಡಿದ್ದ 20 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ ಆರೋಪ ಸಂಬಂಧ ಉದ್ಯಮಿ ಆಲಂ ಪಾಷಾ 2011ರ ಆ.20ರಂದು ಲೋಕಾಯುಕ್ತ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ಕೋರ್ಟ್ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.

ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಮಾಡಿದ್ದ ಲೋಕಾಯುಕ್ತ ಪೊಲೀಸರು 2012ರ ಮೇ 21ರಂದು ಬಿ.ಎಸ್.ಯಡಿಯೂರಪ್ಪ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದರು. ಬಳಿಕ ಲೋಕಾಯುಕ್ತ ಕೋರ್ಟ್ 2016ರ ಜುಲೈ 25ರಂದು ಆರೋಪಿಗಳ ವಿರುದ್ಧ ಕಾಗ್ನಿಸೆನ್ಸ್ ತೆಗೆದುಕೊಳ್ಳಲು ನಿರಾಕರಿಸಿ, ಚಾರ್ಚ್ ಶೀಟ್ ರದ್ದುಪಡಿಸಿ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ದೂರುದಾರ ಆಲಂ ಪಾಷಾ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಜಾರ್ಜ್‍ಶೀಟ್ ರದ್ದುಪಡಿಸಿದ ಲೋಕಾಯುಕ್ತ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು, ಚಾರ್ಜ್‍ಶೀಟ್ ಪ್ರಕಾರ ಮುಂದಿನ ಪ್ರಕ್ರಿಯೆ ಕೈಗೊಳ್ಳಲು ಲೋಕಾಯುಕ್ತ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News